Flash News

ಲವ್ವರ್‌ಗೆ ತಾಯಿಯ ಖಾಸಗಿ ಫೋಟೋ ರವಾನೆ: ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲು

ಬೆಂಗಳೂರು: ಮಗಳೇ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋ ತೆಗೆದು ಲವ್ವರ್‌ಗೆ ಕಳುಹಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲಾಗಿದೆ.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ತಾಯಿಯೇ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದರು. ತಮ್ಮ ಹಾಗೂ ತಮ್ಮ ಅಕ್ಕನ ಖಾಸಗಿ ಫೋಟೋಗಳನ್ನು ಮಗಳು ಆಕೆಯ ಪ್ರಿಯಕರನಿಗೆ ಕಳಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ನೀಡುತ್ತಿದ್ದಂತೆ ಪೊಲೀಸರು 23 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಖಾಸಗಿ ಫೋಟೋ ತೆಗೆದಿದ್ಯಾಕೆ ಎಂಬುವುದು ಬಯಲಾಗಿದೆ. ಕುಟುಂಬಸ್ಥರು ಮದುವೆಗೆ ಒಪ್ಪದಿದ್ದರೆ ಈ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವಂತೆ ಯುವತಿಗೆ ತಿಳಿಸಿದ್ದಾಗಿ ಪ್ರಿಯಕರ ಸತ್ಯ ಬಾಯ್ಬಿಟ್ಟಿದ್ದಾನೆ.

ಯುವತಿ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆಯೂ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸರಗೊಂಡ ಯುವತಿ ಪ್ರಿಯಕರನ ಜೊತೆಗೆ ಚರ್ಚಿದ್ದಳು. ಈ ವೇಳೆ ಖಾಸಗಿ ಫೋಟೋ ತೆಗೆದು ಇಟ್ಕೋ, ಮದುವೆಗೆ ಒಪ್ಪದೇ ಇದ್ದಾಗ ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡೋಣ ಎಂದು ತಿಳಿಸಿದ್ದ ಎಂದು ತಿಳಿದುಬಂದಿದೆ.

ನಡೆದಿದ್ದೇನು?
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ. ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್ಫೋನ್‌ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್ಫೋನ್ ತೆಗೆಸಿಕೊಟ್ಟಿದ್ದರು.

ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಯನ್ನು ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಪ್ರವೇಶಿಸುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್ ಕಟ್ ಮಾಡಿದ್ದಾಳೆ. ಮಗಳು ಕರೆಯನ್ನು ಕಡಿತ ಮಾಡಿದ ಬಳಿಕ ತಾಯಿಗೆ ಅನುಮಾನ ಬರಲು ಆರಂಭವಾಗಿದೆ. ನೀನು ಫೋನಿನಲ್ಲಿ ಮಾತನಾಡಿದ್ದು ಯಾರ ಜೊತೆ ಎಂಬ ತಾಯಿಯ ಪ್ರಶ್ನೆಗೆ ಮಗಳು ಸರಿಯಾಗಿ ಉತ್ತರ ನೀಡಲಿಲ್ಲ. ಈ ವಿಚಾರ ಕೇಳಿದ್ದಕ್ಕೆ ರೇಗಾಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆಪ್ತ ಸಂಬಂಧಿಕರ ಮೂಲಕ ಸತ್ಯ ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ

ಪೋಷಕರು ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಪುತ್ರಿಗೆ ಸಲಹೆ ನೀಡಲು ಕೇಳಿಕೊಂಡಿದ್ದಾರೆ. ಸಂಬಂಧಿಕರು ಆಕೆಯ ಜೊತೆ ಮಾತನಾಡಿದಾಗಲೂ ಆಕೆ ಯುವಕನ ಬಗ್ಗೆ ಹೇಳಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೇ ಫೋನ್ ಪಾಸ್‌ವರ್ಡ್ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ. ಹಲವು ಗಂಟೆಯ ಮನವೊಲಿಕೆ ಮಾಡಿದ ನಂತರ ಆಕೆಯ ಫೋನ್ ಪಾಸ್‌ವರ್ಡ್ ಪಡೆಯಲು ಯಶಸ್ವಿಯಾಗಿದ್ದಾರೆ.

ಪಾಸ್‌ವರ್ಡ್ ಹಾಕಿ ಫೋನಿನ ಫೋಟೋ ಗ್ಯಾಲರಿ ನೋಡುವಾಗ ಪೋಷಕರು, ಸಂಬಂಧಿಕರು ಶಾಕ್ ಆಗಿದ್ದಾರೆ. ತಾಯಿ ಮಲಗಿದ್ದಾಗ ತೆಗೆದ ಖಾಸಗಿ ಫೋಟೋ, ತಾಯಿಯ ಹಿರಿಯ ಸಹೋದರಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವರ ನಗ್ನ ಫೋಟೋಗಳು, ವಿಡಿಯೋಗಳು ಮೊಬೈಲಿನಲ್ಲಿ ಇರುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೇ ಆ ಫೋಟೋಗಳನ್ನು ಆಕೆ ಪ್ರಿಯಕರನಿಗೆ ಕಳುಹಿಸಿದ್ದನ್ನು ನೋಡಿ ಹೌಹಾರಿದ್ದಾರೆ.