Flash News

ಮೈಸೂರು: ಗಂಡನನ್ನು ಮುಗಿಸಲು ಪ್ಲಾನ್​ ಮಾಡಿ ಸಿಕ್ಕಿಬಿದ್ದ ಪತ್ನಿ; ನಾಲ್ವರ ಬಂಧನ

ಮೈಸೂರು: ಸಂಸಾರದಲ್ಲಿ ಕಲಹ ಉಂಟಾದ ಹಿನ್ನೆಲೆ ಗಂಡನನ್ನೇ ಕೊಲೆ ಮಾಡಲು ಪ್ಲಾನ್‌ ಹಾಕಿ ವಿಫಲವಾದ್ದರಿಂದಾಗಿ ಹೆಂಡತಿ ಸೇರಿ 4 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ನಂಜನಗೂಡು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಿಲಾಡಿ ಪತ್ನಿ ಅಂದರ್ ಆಗಿದ್ದಾರೆ. ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ ಪತ್ನಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾರೆ. ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.

ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ, ಈಕೆಯ ಸಹೋದರ ಸಂಜಯ್, ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಫೈಬರ್ ಡೋರ್​ಗಳನ್ನ ಫಿಟ್ ಮಾಡುವ ವೃತ್ತಿ ನಡೆಸುತ್ತಿದ್ದ ರಾಜೇಂದ್ರ ಅವರನ್ನ ಡ್ರ್ಯಾಗರ್​ನಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಪತ್ನಿಯ ಸಂಚನ್ನ ಬಯಲು ಮಾಡುವಲ್ಲಿ ನಂಜನಗೂಡು ಪೊಲೀಸರು ಸಕ್ಸಸ್ ಆಗಿದ್ದಾರೆ. ಗಾಯಗೊಂಡ ಗಂಡ ರಾಜೇಂದ್ರ ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ ?: ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯವಿತ್ತು, ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಅಕ್ಟೋಬರ್ 25 ರಂದು ರಾಜೇಂದ್ರ ಅವರು ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್​ನಲ್ಲಿ ಕೂರಿಸಿಕೊಂಡು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದಾಗ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಅಡ್ಡವಾಗಿ ಬಂದು ನಿಂತಿದೆ. ನಂತರ ಈ ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿದ್ದಾನೆ. ಆಗ ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ರಾಜೇಂದ್ರ ಅವರಿಗೆ ತಿವಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಒಂದು ವಾಹನ ಬಂದಿದೆ. ಆಗ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ರಾಜೇಂದ್ರ ಅವರು ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅಲರ್ಟ್ ಆದ ನಂಜನಗೂಡು ಪೊಲೀಸರು, ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್, ಡಿವೈಎಸ್ಪಿ ರಘು ಅವರ ಮಾರ್ಗದರ್ಶನದಲ್ಲಿ ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ನೆರವು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತನಿಖೆ ಆರಂಭಿಸಿದಾಗ ಪತ್ನಿ ಸಂಗೀತಾ ಅವರ ಕೊಲೆ ಸ್ಕೆಚ್ ಬಯಲಾಗಿದೆ.