Flash News

ದೇವಸ್ಥಾನಕ್ಕೆ ಬಿಡದಿದ್ದರೆ ನಿಮ್ಮದೇ ದೇವಸ್ಥಾನ ಕಟ್ಟಿ ಎಂದಿದ್ದು ನಾರಾಯಣ ಗುರುಗಳು, ಆ ಕಾಲಕ್ಕೆ ಅದೊಂದು ದೊಡ್ಡ ಕ್ರಾಂತಿ: ಸಿಎಂ ಸಿದ್ದರಾಮಯ್ಯ

ಉಳ್ಳಾಲ: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ‌

ಶಿವಗಿರಿ ಮಠ ವರ್ಕಲ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಬುಧವಾರ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ ಮೈದಾನದಲ್ಲಿ ನಡೆದ ಶತಮಾನದ ಮಹಾಪ್ರಸ್ಥಾನ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾಗಾಂಧಿ ಐತಿಹಾಸಿಕ ಗುರು-ಗಾಂಧಿ ಸಂವಾದ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಜಾತ್ಯಾತೀತರಾಗಿದ್ದು ಒಂದು ಜಾತಿ, ಒಂದು ಮತ, ಒಂದೇ ದೇವರೆಂಬ ಸಂದೇಶವನ್ನ ಜೀವನದುದ್ದಕ್ಕೂ ಸಾರಿದವರು. ಗುರುಗಳು ತಾವು ನಂಬಿರುವ ವಿಚಾರಗಳನ್ನ ಗಾಂಧಿ-ಗುರು ಸಂವಾದದಲ್ಲಿ ಗಾಂಧೀಜಿ ಮುಂದೆ ಮಂಡಿಸಿದ್ದರು. ಜಾತಿ ವ್ಯವಸ್ಥೆ ಎಂಬುದು ಈಗಲೂ ಸಮಾಜದಲ್ಲಿ ಚಾಲನೆಯಲ್ಲಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಮನುಷತ್ವ ಕೂಡಿದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಯಾವ ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ನಿರಾಕರಿಸುತ್ತಾರೋ ಅಂತಹ ಕ್ಷೇತ್ರಗಳಿಗೆ ಹೋಗದೆ, ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜಾರಿ ಆಗಿಯೆಂದು ಸಮಾನತೆಯ ಸಂದೇಶ ಸಾರಿ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳಾಗಿದ್ದಾರೆ.

ಸಾಮಾಜಿಕ ಅಸಮಾನತೆ ತೊಲಗಿಸಲು ರಾಜ್ಯ ಸರಕಾರವೂ ಕೂಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಂಚ ಗ್ಯಾರಂಟಿ ಯೋಜನೆಗಳೂ ಅದರ ಭಾಗವಾಗಿದೆ. ಮಹಿಳೆಯರು ಸ್ವತಂತ್ರರಾಗಿ ಎಲ್ಲಾ ಸಂಕೋಲೆಗಳಿಂದ ಹೊರ ಬರಬೇಕೆಂದು ಯೋಜನೆಗಳನ್ನ ರೂಪಿಸಲಾಗಿದೆ. ಗುರುಗಳ ಸಂದೇಶದಂತೆ ಶಿಕ್ಷಣದಿಂದ‌ ಮಾತ್ರ ಎಲ್ಲಾ ಜಾತಿ ಪದ್ಧತಿ, ಅಸಮಾನತೆಯಿಂದ ವಿಮೋಚನೆ ಸಾಧ್ಯ. ಗುಲಾಮಗಿರಿಯನ್ನ ಕಿತ್ತೆಸೆಯದೆ ಸ್ವಾಭಿಮಾನ ಮೈಗೂಡಿಸಲು ಸಾಧ್ಯವಿಲ್ಲ. ನಮ್ಮೊಳಗೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಬೆಳೆಸಬೇಕಿದ್ದು, ಇದನ್ನೇ ಗಾಂಧೀಜಿಯವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಪಾದಿಸಿದ್ದರು. 2016ರಲ್ಲಿ ನಮ್ಮ ಸರಕಾರವೇ ನಾರಾಯಣ ಗುರು ಜಯಂತಿ ಆಚರಣೆಗೆ ಆದೇಶಿಸಿತ್ತು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಲು ಹೇಳಿವೆ ಹೊರತು ಧರ್ಮ, ಜಾತಿ ಹೆಸರಲ್ಲಿ ಸಮಾಜ ಒಡೆಯುವುದಕ್ಕೆ ಹೇಳಿಲ್ಲ ಎಂದರು.

‘ಶಸ್ತ್ರಚಿಕಿತ್ಸೆಗೆ ಕುರುಬರದ್ದೇ ರಕ್ತ ಬೇಕು ಎಂದು ನಾನು ಕೇಳುವುದಿಲ್ಲ. ದಲಿತರ, ಕ್ರೈಸ್ತರ, ಮುಸ್ಲೀಮರ ರಕ್ತವಾದರೂ ಆಗುತ್ತದೆ. ಆದರೆ, ವಾಸಿ ಆದ ಬಳಿಕ‌ ನೀವು ಯಾವ ಜಾತಿ, ಯಾವ ಧರ್ಮ‌ಎಂದು ಕೇಳುತ್ತೇವೆ. ಅಷ್ಟರಮಟ್ಟಿಗೆ ನಾವು ಸ್ವಾರ್ಥಿಗಳು. ಇದನ್ನು ಬಿಡಬೇಕು.ಜಾತಿ ಹೆಸರಿನಲ್ಲಿ‌ ಜನರನ್ನು ಒಡೆಯುವ ಕೆಲಸ ಆಗಬಾರದು. ಎಲ್ಲರೂ ಮಾನವರಾಗಿ ಬದುಕಬೇಕು’ ಎಂದರು

‘ನಾರಾಯಣ ಗುರುಗಳ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ 2016ರಲ್ಲಿ ನಮ್ಮ ಸರ್ಕಾರ ಅವರ ಜಯಂತಿ ಆಚರಿಸಲು ತೀರ್ಮಾನಿಸಿತ್ತು’ ಎಂದರು.

ಕೇರಳದ ವರ್ಕಲ ಶಿವಗಿರಿ ಮಠದವರು ರಾಜ್ಯದಲ್ಲಿ ಶಾಖಾ ಮಠವನ್ನು ಆರಂಭಿಸಲು 5 ಎಕರೆ ಜಮೀನು ಕೇಳಿದ್ದಾರೆ. ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಜಾಗ ಗುರುತಿಸಲು ಸೂಚಿಸಿದ್ದೇನೆ.‌ ನಮ್ಮ‌ ಸರ್ಕಾರ ಶಿವಗಿರಿ ಶಾಖಾ ಮಠ ಸ್ಥಾಪನೆಗೆ ಜಮೀನು ನೀಡಲು ಸಿದ್ಧವಿದೆ ಎಂದರು.

ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್, ‘ಈಗಲೂ ಸಮಾಜದಲ್ಲಿ ಗಂಭಿರ ಪ್ರಮಾಣದಲ್ಲಿ ಅಸಮಾನತೆ ಇದೆ. ಸಂವಿಧಾನದ ಮೌಲ್ಯಗಳು ಬೆದರಿಕೆ ಎದುರಿಸುತ್ತಿವೆ. ನಾರಾಯಣಗುರು- ಗಾಂಧೀಜಿ ಅನುಯಾಯಿಗಳು ಅವರ ತತ್ವಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕು’ ಎಂದರು.

ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ , ‘ಇಂದು ಒಂದು ದಿನ ಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ.‌ ಇದರ ಸಂದೇಶ ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ತಲುಪಬೇಕು. ಈ ಐತಿಹಾಸಿಕ ಕಾರ್ಯಕ್ರಮ‌ದ ನೆನಪು ಸದಾ ಹಸಿರಾಗಿರುವಂತೆ ಮಾಡಲು ಈ ಮೈದಾನಕ್ಕೆ ಗುರು-ಗಾಂಧಿ ಮೈದಾನ ಎಂದು ನಾಮಕರಣ ಮಾಡಲಿದ್ದೇವೆ. ಇಲ್ಲಿ ಉದ್ಯಾನ, ಕ್ರೀಡಾಂಗಣ ಅಭಿವೃದ್ದಿ ಪಡಿಸಲಿದ್ದೇವೆ ಎಂದರು.

ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶಿವಗಿರಿ ಮಠದ ಕಾರ್ಯದರ್ಶಿ ಶುಭಾಂಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಗೃಹಸಚಿವ ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಲಕ್ಷ್ಮೀ ಹೆಬ್ಬಾಳಕರ್, ವಸತಿ ಮತ್ತು ವಕ್ಪ್ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸಂಸದ ರಾಜಮೋಹನ್ ಉನ್ನಿತಾನ್, ಕಾರ್ಯಕ್ರಮ ಆಯೋಜನೆ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಪ್ರಧಾನ ಸಂಚಾಲಕ ಪಿ.ವಿ.ಮೋಹನ್, ಮುಖಂಡ ಬಿ.ಜನಾರ್ಧನ ಪೂಜಾರಿ, ದಕ್ಷಿಣ ಕನದನಡ ಜಿಲ್ಲೆಯ ಶಾಸಕರು ಭಾಗವಹಿಸಿದ್ದರು.