Flash News

ಶಾಂತಿ ಬೋಧಿಸುವ ಧರ್ಮ ಇಸ್ಲಾಂನಲ್ಲಿ ಶಾಂತಿ ಕಾಣುತ್ತಿಲ್ಲ: ಮೋಹನ್ ಭಾಗವತ್

ಮುಂಬೈ: ಇಸ್ಲಾಂ ಅನ್ನು ಶಾಂತಿ ಬೋಧಿಸುವ ಧರ್ಮ ಎನ್ನಲಾಗುತ್ತಿದೆ. ಆದರೆ ಶಾಂತಿ ಕಂಡುಬರುತ್ತಿಲ್ಲ. ಆಧ್ಯಾತ್ಮಿಕತೆ ಇಲ್ಲದ ಧರ್ಮವು ಆಕ್ರಮಣಕಾರಿಯಾಗುತ್ತದೆ ಹಾಗೂ ಪ್ರಾಬಲ್ಯ ಸಾಧಿಸಲು ಮುಂದಾಗುತ್ತದೆ ಎಂದು ಮೋಹನ್‌ ಭಾಗವತ್‌ ಹೇಳಿದರು.

ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ಏಸು ಕ್ರಿಸ್ತ ಮತ್ತು ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಂತೆ ಈಗ ಇಲ್ಲ. ನೈಜ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಪಾಲನೆ ಅಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಾಕಷ್ಟು ವಿರೋಧದ ನಡುವೆಯೂ ಸಂಘದ ಸ್ವಯಂ ಸೇವಕರು ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರಲ್ಲ’ ಎಂಬ ಮತ್ತೊಂದು ಪ್ರಶ್ನೆಗೆ ‘ಎರಡೂ ಕಡೆಯವರೂ ವಿರೋಧ ಮಾಡುತ್ತಲೇ ಇದ್ದರೆ ಕೇವಲ ಸಂಘರ್ಷವೇ ಇರುತ್ತದೆ. ನಾವು ಏನನ್ನೂ ಸಾಧಿಸಲು ಸಾಧ್ಯ ಇಲ್ಲ’ ಎಂದು ಪ್ರತಿಕ್ರಿಯಸಿದರು.

‘ದೇಶದ ಮುಸ್ಲಿಮರು ಹಾಗೂ ಕ್ರೈಸ್ತರೊಂದಿಗೆ ಸ್ನೇಹ ಮಾತುಕತೆ ಹಾಗೂ ನಂಬಿಕೆಯ ಅಗತ್ಯವಿದೆ. ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎಂಬುದು ಇಲ್ಲ. ನಾವೆಲ್ಲಾ ಒಂದೇ ಸಮಾಜ’ ಎಂದೂ ಹೇಳಿದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (UCC) ರೂಪಿಸಬೇಕು ಮತ್ತು ಅದು ವಿಭಜನೆಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ RSSಗೆ ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬಂದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ. ಅದು ಬೇರೆ ದಾರಿ, ನಾವು ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಗಿದೆ ಎಂದರು.

ಸ್ವಯಂಸೇವಕರ ಕಠಿಣ ಪರಿಶ್ರಮ ಮತ್ತು ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ ‘ಅಚ್ಛೇ ದಿನ್’ ಬಂದಿದೆ. ಅಗತ್ಯವಿದ್ದಾಗ ಆರ್‌ಎಸ್‌ಎಸ್ ಸಲಹೆ ನೀಡುತ್ತದೆ. ಅವರು ನಮ್ಮೊಳಗಿಂದ ಬಂದವರಾಗಿರುವುದರಿಂದ ಅವರ ಪಾಪಗಳು ನಮ್ಮ ಮೇಲೆ ಹೊರಿಸಲ್ಪಡುತ್ತವೆ. ರಾಜಕೀಯ ಒತ್ತಡವು ಮತದಾರರಿಂದ ಬರುತ್ತದೆಯೇ ಹೊರತು ಆರ್‌ಎಸ್‌ಎಸ್‌ನಿಂದಲ್ಲ ಎಂದು ಹೇಳಿದರು.

100 ವರ್ಷಗಳಲ್ಲಿ ಕಮ್ಯುನಿಸ್ಟರ ನೆಲೆ ಏಕೆ ಬೆಳೆದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಒಂದು ವೇಳೆ ಕೇಳಿದರೆ ಅವರಿಗೆ ಆರ್ ಎಸ್ ಎಸ್ ಮಾರ್ಗದರ್ಶನ ನೀಡಬಹುದು. ಆರ್‌ಎಸ್‌ಎಸ್ ಯುವ ಸಂಘಟನೆಯಾಗಿದ್ದು, ಸರಾಸರಿ ವಯಸ್ಸು 28. ಅದನ್ನು 25ಕ್ಕೆ ಇಳಿಸಲು ಬಯಸಿರುವುದಾಗಿ ಎಂದು ಅವರು ಹೇಳಿದರು.

ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೆಂಬ ಬಹುದಿನಗಳ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಭಾಗವತ್, ಅವರಿಗೆ ಪ್ರಶಸ್ತಿ ನೀಡಿದರೆ ಅದರ ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿದರು. ನಟಿಯರಾದ ರವೀನಾ ಟಂಡನ್, ಅನನ್ಯ ಪಾಂಡೆ, ನಟ ನಟ ವಿಕ್ಕಿ ಕೌಶಲ್, ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್, ಮಧುರ್ ಭಂಡಾರ್ಕರ್, ರಮೇಶ್ ತೌರಾನಿ ಮತ್ತು ಸಂಗೀತಗಾರ ಪಂಡಿತ್ ಹೃದಯನಾಥ್ ಮಂಗೇಶ್ಕರ್ ಸೇರಿದಂತೆ ಹಲವಾರು ಪ್ರಮುಖರು ಸಂವಾದದಲ್ಲಿ ಉಪಸ್ಥಿತರಿದ್ದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆ ರೂಪಿಸಬೇಕು. ಅದು ವಿಭಜನೆಗಳನ್ನು ಸೃಷ್ಟಿಸಬಾರದು. ಉತ್ತರಾಖಂಡದಲ್ಲಿ ಮೂರು ಲಕ್ಷ ಸಲಹೆಗಳನ್ನು ನೀಡಲಾಯಿತು. ಸಂಬಂದಪಟ್ಟ ಎಲ್ಲರೊಂದಿಗೆ ಮಾತನಾಡಿ, ಕಾಯ್ದೆ ಅಂಗೀಕರಿಸಲಾಯಿತು ಎಂದು ಅವರು ಹೇಳಿದರು.