Flash News

ಪುತ್ತಿಲ ಪರಿವಾರ, ಬಿಜೆಪಿ ನಡುವಿನ ಸಮರ ಮತ್ತೆ ತಾರಕಕ್ಕೆ: 2028ರ ವಿಧಾನಸಭಾ ಚುನಾವಣೆಯಲ್ಲಿ ಅರುಣ್‌ ಪುತ್ತಿಲ ಪಕ್ಷೇತರ ಅಭ್ಯರ್ಥಿ..?

ಪುತ್ತೂರು: ಎರಡೂವರೆ ವರ್ಷದ ಹಿಂದೆ ಆರಂಭವಾಗಿದ್ದ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಶೀತಲ ಸಮರ ಮತ್ತೆ ತಾರಕಕ್ಕೇರಿದೆ!

2028ರ ವಿಧಾನಸಭಾ ಚುನಾವಣೆಯಲ್ಲಿ ಅರುಣ್‌ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿ, ಅವರಿಗೆ ನಮ್ಮ ಬೆಂಬಲ ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದು ಪುತ್ತಿಲ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪದ ಸಮರ ಆರಂಭವಾಗಿದೆ.

2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ವಂಚಿತಗೊಂಡ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್‌ ಪುತ್ತಿಲ 60 ಸಾವಿರಕ್ಕೂ ಅಧಿಕ ಮತ ಪಡೆದಿದ್ದರಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಅದಾದ ಬಳಿಕ ಎರಡು ತಂಡದ ನಡುವೆ ವಾಗ್ವಾದ ಮುಂದುವರಿದಿತ್ತು. 2024ರ ಲೋಕಸಭಾ ಚುನಾವಣ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪುತ್ತಿಲ ತಂಡ ಮರಳಿ ಬಿಜೆಪಿಗೆ ಸೇರಿತ್ತು. ಈ ಸೇರ್ಪಡೆ ವಿಚಾರದಲ್ಲಿಯೂ ಬಿಜೆಪಿಯ ಒಂದು ಬಣದ ಆಕ್ಷೇಪ ಇತ್ತು.

ಸಿಗದ ಸ್ಥಾನಮಾನ: ಬಿಜೆಪಿ ಜಿಲ್ಲಾ ಸಮಿತಿ, ಮಂಡಲ ಸಮಿತಿಯಲ್ಲಿ ಪುತ್ತಿಲ ಬೆಂಬಲಿಗರಿಗೆ ಸ್ಥಾನಮಾನ ನೀಡಲಾಗಿತ್ತು. ಅರುಣ್‌ ಪುತ್ತಿಲ ಅವರಿಗೆ ಸ್ಥಾನಮಾನ ನೀಡುವ ಮಾತುಕತೆ ನಡೆದಿದ್ದರೂ ಬೇಡಿಕೆ ಈಡೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡಲ ಸಮಿತಿಯಲ್ಲಿ ಜವಾಬ್ದಾರಿ ಹೊಂದಿದ್ದ ಪುತ್ತಿಲ ಬೆಂಬಲಿಗರು ಸಹಿತ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಂದ ದೂರ ನಿಂತಿದ್ದು ಪುತ್ತೂರಿನಲ್ಲಿ ಸ್ವತಃ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗವಹಿಸಿದ್ದ ಅಟಲ್‌ ವಿರಾಸತ್‌ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿರಲಿಲ್ಲ. ಈ ಬಗ್ಗೆ ಅರುಣ್‌ ಪುತ್ತಿಲ ಹೇಳಿಕೆ ನೀಡಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನವೇ ಇರಲಿಲ್ಲ ಎಂದಿದ್ದು ಇದಾದ ಬಳಿಕ ಉಭಯ ತಂಡಗಳ ನಡುವೆ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.

ಅರುಣ್‌ ಪುತ್ತಿಲ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ. ಪಕ್ಷದ ವರಿಷ್ಠರು ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.