ಚಿತ್ತೋರ್‌ಗಢ(ರಾಜಸ್ಥಾನ): ಮೂರುವರೆ ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧನದಲ್ಲಿದ್ದ ಬಾಲಾಪರಾಧಿಯ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿ, 35 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ಜತೆಗೆ, 1.40 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಅತ್ಯಾಚಾರ ಕೇಸಲ್ಲಿ ತನಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಲು ಕೋರಿ ಬಾಲಾಪರಾಧಿಯು ಹೈಕೋರ್ಟ್ ಮೆಟ್ಟಿಲೇರಿದ್ದ. ಇದನ್ನು ಹೈಕೋರ್ಟ್ ಬಾಲ ನ್ಯಾಯಮಂಡಳಿಗೆ ವರ್ಗಾಯಿಸಿತ್ತು. ಅಪರಾಧದ ತೀವ್ರತೆಯ ಹಿನ್ನೆಲೆಯಲ್ಲಿ ಮಂಡಳಿಯು ಪ್ರಕರಣವನ್ನು ಮತ್ತೆ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.
ಅದರಂತೆ, ಪೋಕ್ಸೋ ವಿಶೇಷ ನ್ಯಾಯಾಲಯವು ಪ್ರಕರಣದ ಮರು ವಿಚಾರಣೆ ನಡೆಸಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶೆ ಶಹನಾಜ್ ಪರ್ವೀನ್ ಅವರು, ಪ್ರಾಸಿಕ್ಯೂಷನ್ ಸಲ್ಲಿಸಿದ 23 ಸಾಕ್ಷಿಗಳು ಮತ್ತು 40 ದಾಖಲೆಗಳನ್ನು ಗಮನಿಸಿದರು. ಇದರಿಂದ ಆರೋಪಿ ತಪ್ಪಿತಸ್ಥ. ಮೂರೂವರೆ ವರ್ಷದ ಮಗುವಿಗೆ ತೀವ್ರ ಹಾನಿ ಉಂಟು ಮಾಡಿದ್ದಾನೆ ಎಂದರು.
ಇದರಿಂದ ಆರೋಪಿಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 363ರ ಅಡಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ, ಸೆಕ್ಷನ್ 307ರ ಅಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 3/4ರ ಅಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದರು.
2018ರ ಮಾರ್ಚ್ 6ರಂದು ಬಾಲಾಪರಾಧಿಯು ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಇದರಿಂದ ಮಗು ಗಂಭೀರ ದೈಹಿಕ ಗಾಯ, ಹಿಂಸೆಗೆ ತುತ್ತಾಗಿದ್ದಳು. ಭದೇಸರ್ ಪೊಲೀಸ್ ಠಾಣಾಧಿಕಾರಿ ಹಿಮಾಂಶು ಸಿಂಗ್ ರಾಜಾವತ್ ಅವರು ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸಿ ಆರೋಪಿಯನ್ನು ಕೋರ್ಟ್ ಮುಂದೆ ತಂದು ನಿಲ್ಲಿಸಿದ್ದರು.



