ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ತನ್ನ 100ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಹೀಗಾಗಿ ಮುಂಬೈನ ನೆಹರೂ ಕೇಂದ್ರದಲ್ಲಿ ಮುಂದಿನ ಎರಡು ದಿನಗಳು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ (Bollywood) ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಭಾಗವಹಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಸುಭಾಷ್ ಘಾಯ್, ಹೇಮಾ ಮಾಲಿನಿ, ಅಶ್ವಿನಿ ಭಾವೆ ಮೊದಲಾದವರು ಹಾಜರಾಗಿದ್ದರು. ಆದಾಗ್ಯೂ ಎಲ್ಲರ ಗಮನವನ್ನು ಸೆಳೆದದ್ದು ನಟ ಸಲ್ಮಾನ್ ಖಾನ್ (Salman Khan) ಅವರ ಆಗಮನ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ನವೇ ಕ್ಷಿತಿಜ್’ ಉಪನ್ಯಾಸ ಸರಣಿಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರೂ, ಸಲ್ಮಾನ್ ಖಾನ್ ವೇದಿಕೆಗೆ ಕಾಲಿಟ್ಟ ಕ್ಷಣವೇ ಎಲ್ಲಾ ಕ್ಯಾಮೆರಾಗಳು ಅವರ ಕಡೆ ತಿರುಗಿದವು. ಬಂದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಹಾಗೂ ಅತಿಥಿಗಳು ಅವರನ್ನು ಸುತ್ತುವರಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.
ಡಾ. ಕೇಶವ ಬಲಿರಾವ್ ಹೆಡ್ಗೆವಾರ್ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ಶತಮಾನ ಪೂರೈಸಿಕೊಂಡಿದೆ. ಹಿಂದೂ ಸಮಾಜದ ಸಂಘಟನೆ, ಶಿಸ್ತುಬದ್ಧತೆ ಮತ್ತು ಮಾನವೀಯ ಸೇವೆಯ ಕಾರ್ಯಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸಂಸ್ಥೆ ತನ್ನ ಹೆಜ್ಜೆ ಗುರುತು ಮೂಡಿಸಿದೆ. ಸಂಘದ ಇತಿಹಾಸದ ಈ ಮಹತ್ವದ ಘಟ್ಟವನ್ನು ಆಚರಿಸುವ ಸಲುವಾಗಿ ಮುಂಬೈನ ನೆಹರೂ ಕೇಂದ್ರದಲ್ಲಿ ಭವ್ಯ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಇನ್ನು ಇದೇ ವೇಳೆ ಸಮಾಜದ ಮೌಲ್ಯ ಮತ್ತು ಸಾಮಾಜಿಕ ಪ್ರಭಾವದ ಕುರಿತು ವಿಷಯ ಪ್ರಸ್ತಾಪಿಸಿ ಮಾತನಾಡಿದ ಮೋಹನ್ ಭಾಗವತ್, ಸಲ್ಮಾನ್ ಖಾನ್ ಅವರನ್ನು ಯುವ ಜನ ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಅದರಲ್ಲಿಯೂ ಕಾಲೇಜ್ ವಿದ್ಯಾರ್ಥಿಗಳು ಸಲ್ಮಾನ್ ಖಾನ್ ಅವರ ಫ್ಯಾಷನ್‌ನ ನಕಲು ಮಾಡುತ್ತಾರೆ ಎಂದು ಹೇಳಿದ ಮೋಹನ್ ಭಾಗವತ್ ಯಾಕೆ ನೀವು ಈ ರೀತಿ ಫ್ಯಾಷನ್ ಮಾಡುತ್ತಿದ್ದೀರಾ ಎಂದು ಕೇಳಿದರೆ ಅವರೆಲ್ಲ ನಮಗೆ ಕಾರಣ ಗೊತ್ತಿಲ್ಲ, ಸಲ್ಮಾನ್ ಖಾನ್ ಮಾಡುತ್ತಿದ್ದಾರೆ ಹೀಗಾಗಿ ನಾವು ಮಾಡುತ್ತೇವೆ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಒಳ್ಳೆಯ ಮೌಲ್ಯಗಳು ಕೂಡ ಒಂದು ಫ್ಯಾಷನ್ ಆಗಬೇಕು ಎನ್ನುವುದೇ ಈ ಮಾತಿನ ಅರ್ಥ ಎಂದಿದ್ದಾರೆ.
ಹಿರಿಯ ನಟಿ ಹೇಮಾಮಾಲಿನಿ, ನಟಿ ಅಶ್ವಿನಿ ಭಾವೆ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 900 ಅತಿಥಿಗಳನ್ನು ಆಮಂತ್ರಿಸಲಾಗಿದ್ದು, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಅವರಿಗೆ ಕೂಡ ಆಮಂತ್ರಣವನ್ನು ನೀಡಲಾಗಿದೆ. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರು ಖಾನ್‌ಗಳು ಬಂದ ಮಾಹಿತಿ ಇಲ್ಲ. ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಸೇರಿ ಬಾಲಿವುಡ್‌ನ ಇನ್ನೂ ಹಲವರನ್ನು ಆಹ್ವಾನಿಸಲಾಗಿದ್ದು ನಾಳೆ (ಫೆಬ್ರವರಿ 8 ) ಹಲವರು ಬರುವ ನಿರೀಕ್ಷೆ ಇದೆ. ಸದ್ಯ ಸಲ್ಮಾನ್ ಖಾನ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



