ಸೌದಿ: ಅರಬ್ ದೇಶಗಳಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಂದ ಹೊರಬರಲಾಗದೆ ಸಿಲುಕಿರುವ ಕೋಟ್ಯಂತರ ಭಾರತೀಯರಿಗೆ ನಿರಾಳ ತರುವ ಸುದ್ದಿ ಇದೆ. ಸೌದಿ ಅರೇಬಿಯಾ ದೇಶದಲ್ಲಿ ಕಾರ್ಮಿಕರ ಪಾಲಿಗೆ ಅತ್ಯಂತ ಕರಾಳ ವ್ಯವಸ್ಥೆಯಾದ ‘ಕಫಾಲ’ ಅನ್ನು ನಿಲ್ಲಿಸಲಾಗಿದೆ.
50 ವರ್ಷಗಳಿಂದ ಕಾರ್ಮಿಕರಿಗೆ ಬಂಧನದ ಸಂಕೋಲೆಯಂತೆ ಕಾಡುತ್ತಿದ್ದ ಕಫಾಲ ವ್ಯವಸ್ಥೆ ಕೊನೆಗೊಂಡಿದೆ.
ಈ ಸುಧಾರಣೆಯು ಸುಮಾರು 1.3 ಕೋಟಿ ವಲಸೆ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಿಂದ ಬಂದವರಿಗೆ ಪ್ರಯೋಜನ ನೀಡಲಿದೆ.
1950ರ ದಶಕದಲ್ಲಿ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲಿ ʼಕಫಾಲಾʼ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ʼಕಫಾಲಾʼ ವ್ಯವಸ್ಥೆ ಎಂದರೆ ಅರೇಬಿಕ್ ಭಾಷೆಯಲ್ಲಿ ‘ಪ್ರಾಯೋಜಕತ್ವ’ ಎಂಬ ಅರ್ಥವನ್ನು ಹೊಂದಿದೆ. ಈ ಚೌಕಟ್ಟಿನಡಿಯಲ್ಲಿ ಕಾರ್ಮಿಕರ ಕಾನೂನು ಮಾನ್ಯತೆ ʼಕಫೀಲ್ʼ ಎಂದು ಕರೆಯಲ್ಪಡುವ ಅವರ ಉದ್ಯೋಗದಾತರು ನಿರ್ವಹಿಸುತ್ತಾರೆ. ʼಕಫೀಲ್ʼ ಅನುಮತಿ ಇಲ್ಲದೆ ಕಾರ್ಮಿಕರು ಕೆಲಸ ಬದಲಾಯಿಸಲು, ದೇಶ ತೊರೆಯಲು ಅಥವಾ ಕಾನೂನು ನೆರವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕಾರ್ಮಿಕರ ಶೋಷಣೆ, ಹಿಂಸೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿತ್ತು.
ಈ ವ್ಯವಸ್ಥೆಯಲ್ಲಿ ವಿದೇಶಿ ಕಾರ್ಮಿಕರ ವೀಸಾ ಮತ್ತು ವಾಸದ ಹೊಣೆಗಾರಿಕೆಯನ್ನು ಸ್ಥಳೀಯ ವ್ಯಕ್ತಿ ಅಥವಾ ಕಂಪೆನಿಗೆ ಅಥವಾ ʼಕಫೀಲ್ʼ ಗೆ ನೀಡಲಾಗುತ್ತಿತ್ತು. ಇದು ಸರಕಾರದ ಮೇಲಿನ ಹೊರೆ ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ, ಕಾಲಕ್ರಮೇಣ ಈ ವ್ಯವಸ್ಥೆ ಕಠಿಣ ಟೀಕೆಗೆ ಗುರಿಯಾಯಿತು. ಈ ವ್ಯವಸ್ಥೆಯಿಂದಾಗಿ ಅನೇಕ ಕಾರ್ಮಿಕರು ಶೋಷಣೆಗೆ ಒಳಗಾದರು. ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ಬಲವಂತದ ಕಾರ್ಮಿಕ ಪದ್ಧತಿ ಹಾಗೂ ದಾಸ್ಯಕ್ಕೆ ಸಮಾನ ಪರಿಸ್ಥಿತಿಯೆಂದು ಟೀಕಿಸಿತ್ತು.
ಸೌದಿಯ ಕಾರ್ಮಿಕ ನೀತಿಯಲ್ಲಿ ಸುಧಾರಣೆಗಳೇನು?
ಕಫಾಲ ಬದಲು ಗುತ್ತಿಗೆ ಆಧಾರಿತ ಉದ್ಯೋಗ (contract based employment) ವ್ಯವಸ್ಥೆ ಬರುತ್ತದೆ. ತಮ್ಮ ಕೆಲಸದ ವಿಚಾರದಲ್ಲಿ ಕಾರ್ಮಿಕರಿಗೆ ಹೆಚ್ಚು ಸ್ವಾತಂತ್ರ್ಯ ಮತ್ತು ನಿಯಂತ್ರಣ ಸಿಗುತ್ತದೆ.
ವಿದೇಶೀ ಕಾರ್ಮಿಕರು ಕೆಲಸ ಬದಲಿಸಲು ತಮ್ಮ ಹಾಲಿ ಉದ್ಯೋಗದಾತರ (employers) ಪೂರ್ವಾನುಮತಿ ಪಡೆಯಬೇಕೆಂಬ ಕಡ್ಡಾಯ ನಿಯಮ ಇರುವುದಿಲ್ಲ.
ವಲಸೆ ಕಾರ್ಮಿಕರು ಪ್ರಾಯೋಜಕರ ಅನುಮತಿ ಇಲ್ಲದೆ ಅಥವಾ ಎಕ್ಸಿಟ್ ವೀಸಾ ಇಲ್ಲದೇ ದೇಶ ತೊರೆದು ಹೋಗಲು ಅವಕಾಶ ಇರುತ್ತದೆ.
ಇತ್ತೀಚೆಗೆ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ‘ಆಡುಜೀವಿತಂ’ ಸಿನಿಮಾದಲ್ಲಿ ಈ ವ್ಯವಸ್ಥೆಯ ಕರಾಳತೆಯನ್ನು ಕಟ್ಟಿಕೊಡಲಾಗಿದೆ



