ಬೆಂಗಳೂರು: ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮೇಲೆ ಡೆಲಿವರಿ ಬಾಯ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಕುಮಾರ್ ರಾವ್ ಎಂದು ಗುರುತಿಸಲಾಗಿದೆ.
ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆರ್ ಟಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ಇದೇ ಅಕ್ಟೋಬರ್ 17 ರಂದು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಬ್ರೆಜಿಲ್ ಮೂಲದ ಮಾಡೆಲ್ ಡೆಲಿವರಿ ಆ್ಯಪ್ ಮೂಲಕ ದಿನಸಿ ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಏಜೆಂಟ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ.
ಇದರಿಂದ ಆತಂಕಕ್ಕೀಡಾದ ಬ್ರೆಜಿಲ್ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಡೆಲಿವರಿ ಏಜೆಂಟ್ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಮಾಡೆಲ್ ತನ್ನ ಉದ್ಯೋಗದಾತರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇಲೆ, ನಾವು ಭಾರತೀಯ ನ್ಯಾಯ ಸಂಹಿತಾದ ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಮತ್ತು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



