ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ್ದಕ್ಕಾಗಿ ಬಿಜೆಪಿ, ಹಿಂದುತ್ವ ನಾಯಕರು ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್ ಇತ್ತೀಚೆಗೆ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಈ ನಡುವೆ ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್ “ಶಾರುಖ್ ಖಾನ್ ನಾಲಿಗೆಯನ್ನು ಕತ್ತರಿಸಿದವರಿಗೆ ಒಂದು ಲಕ್ಷ ರೂ. ನಗದು ಬಹುಮಾನ” ನೀಡುವುದಾಗಿ ವಿವಾದಾತ್ಮಕ ಘೋಷಣೆಯನ್ನು ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ, ಶಾರುಖ್ ಖಾನ್ ಸಹ-ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು 2026ರ ಸಾಲಿನ ಐಪಿಎಲ್ಗೆ ಖರೀದಿಸಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ, ಬಾಂಗ್ಲಾ ಆಟಗಾರನನ್ನು ಖರೀದಿಸಿದ್ದಕ್ಕೆ ಬಿಜೆಪಿ ನಾಯಕರುಗಳು ಶಾರುಖ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“‘ಬಾಂಗ್ಲಾದೇಶದಲ್ಲಿ ನಮ್ಮ ಹಿಂದೂ ಸಹೋದರರನ್ನು ಜೀವಂತವಾಗಿ ಸುಡಲಾಗುತ್ತಿದೆ ಮತ್ತು ಅವರು (ಶಾರುಖ್) ಅಲ್ಲಿಂದ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಮೀರಾ ಹೇಳಿಕೊಂಡಿದ್ದಾರೆ.
ಇನ್ನು ಅಯೋಧ್ಯೆ ಮತ್ತು ಇತರ ಸ್ಥಳಗಳ ಕೆಲವು ಸ್ವಾಮೀಜಿಗಳೂ ಟೀಕಿಸಿದ್ದಾರೆ. “ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ ಆದರೆ ಬಾಂಗ್ಲಾದೇಶದ ಕ್ರಿಕೆಟಿಗರು ಅಲ್ಲಿನ ಹಿಂದೂಗಳ ಭದ್ರತೆಯ ವಿಷಯವನ್ನು ಎತ್ತಬೇಕು” ಎಂದು ಸ್ವಾಮೀಜಿ ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ.
ಈ ನಡುವೆ ಶಾರುಖ್ ಖಾನ್ ಅವರನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಫ್ರಾಂಚೈಸಿ ಮಾಲೀಕರನ್ನು ದೂಷಿಸುವ ಬದಲು, ಬಿಸಿಸಿಐ ಮತ್ತು ಐಸಿಸಿ ಅಂತಹ ನಿಯಮಗಳನ್ನು ರೂಪಿಸಲು ಏಕೆ ಅವಕಾಶ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ಪ್ರಶ್ನಿಸಬೇಕಿತ್ತು ಎಂದಿದ್ದಾರೆ.
ಬಿಜೆಪಿಯ ಇಬ್ಬಗೆಯ ನೀತಿಯನ್ನು ಪ್ರಶ್ನಿಸಿದ ಖರ್ಗೆ, “ಪಹಲ್ಗಾಮ್ ದಾಳಿಯ ನಂತರವೂ ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿದಾಗ ಬಿಜೆಪಿ ನಾಯಕರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಕೋವಿಡ್ ಸಮಯದಲ್ಲಿ ಐಪಿಎಲ್ ಪಂದ್ಯಗಳನ್ನು ಇಸ್ಲಾಮಿಕ್ ರಾಷ್ಟ್ರಗಳಿಗೆ ಸ್ಥಳಾಂತರಿಸಿದಾಗ ಮತ್ತು ಅಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಿದಾಗಲೂ ಇವರಿಗೆ ತೊಂದರೆಯಾಗಲಿಲ್ಲ,” ಎಂದೂ ಹೇಳಿದ್ದಾರೆ.



