ಬೆಂಗಳೂರು: ಬಳ್ಳಾರಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಟ್ಟು ಮಾಡಿಕೊಂಡಿದ್ದಾರೆ. ಸಣ್ಣದೊಂದು ಘಟನೆಯಾಗಿದೆ. ಇಷ್ಟೊಂದು ದೊಡ್ಡದು ಯಾಕಾಯ್ತು ಎಂದು ರೇಗಿದ್ದಾರೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಬಳ್ಳಾರಿ ಗಲಾಟೆ ಹಾಗೂ ಗುಂಡಿನ ದಾಳಿಯಲ್ಲಿ ನಡೆದ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಹಾಗೂ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇಂತಹ ಘಟನೆ ಆಗಬಾರದಿತ್ತು, ಆದರೆ ಆಗಿದೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಆಗಿರೋದು ಎಲ್ಲರಿಗೂ ಗೊತ್ತಿದೆ. ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸರು ಘಟನೆ ಸಂಬಂಧ ತನಿಖೆ ಮಾಡ್ತಿದ್ದಾರೆ ಎಂದು ವಿವರಿಸಿದರು.
ಯಾರು ತಪ್ಪು ಮಾಡಿದ್ದಾರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ರಾತ್ರಿ ಒಂದು ಘಂಟೆಗೆ ಪರಿಸ್ಥಿತಿ ತಹಬದಿಗೆ ಬಂದಿದೆ. ನಾನು ಡಿಜಿಪಿ, ಗುಪ್ತಚರ ಇಲಾಖೆಯ ಐಜಿ ಜೊತೆಗೆ ಮಾತನಾಡಿ, ಸಿಎಂಗೆ ಮಾಹಿತಿ ನೀಡಿದ್ದೇವೆ ಎಂದರು.



