Flash News

ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮ್​ಗೆ ಹೋಗಿದ್ದ ಅಕ್ಕ ತಂಗಿ ದುರಂತ ಸಾವು: ಆಗಿದ್ದೇನು?

ಮೈಸೂರು: ಗ್ಯಾಸ್‌ ಗೀಸರ್​ನಿಂದ ಅನಿಲ ಸೋರಿಕೆಯಾಗಿ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಪಿರಿಯಾಪಟ್ಟಣದಲ್ಲಿ ವಾಸವಾಗಿರುವ ಬೆಟ್ಟದಪುರ ಮೂಲದ ಅಲ್ತಾಫ್ ಪಾಷಾ ಅವರ ಎರಡನೇ ಮಗಳು ಗುಲ್ಬಮ್ ತಾಜ್(23) ಮತ್ತು ನಾಲ್ಕನೇ ಮಗಳಾದ ಸಿಮ್ರಾನ್ ತಾಜ್ (21) ಮೃತಪಟ್ಟ ಸಹೋದರಿಯರು.

ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 7ರ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ ತಕ್ಷಣ ಅದರಿಂದ ಬಿಡುಗಡೆಯಾದ ವಿಷಾನಿಲ ಸೇವನೆಯಿಂದ ಉಸಿರಾಡಲು ತೊಂದರೆ ಉಂಟಾಗಿ ತಕ್ಷಣ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಕೆಲ ಹೊತ್ತಾದರೂ ಸ್ನಾನದ ಕೋಣೆಯಿಂದ ಹೊರಗೆ ಬರದಿದ್ದಾಗ, ಕುಟುಂಬಸ್ಥರು ತೆರಳಿ ನೋಡಿದಾಗ ಇಬ್ಬರೂ ಕುಸಿದು ಬಿದ್ದಿದ್ದರು.

ತಕ್ಷಣ ಇಬ್ಬರು ಸಹೋದರಿಯರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಪಿರಿಯಾಪಟ್ಟಣದ ಶವಾಗಾರದಲ್ಲಿ ಇಬ್ಬರೂ ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಬೆಟ್ಟದಪುರದ ಗ್ರಾಮದಲ್ಲಿ ಶುಕ್ರವಾರ ಸಂಜೆ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.