ಬೆಂಗಳೂರು: ರಾಜ್ಯಲ್ಲಿ ಜನರ ಪಾಲಿಗೆ ಸರ್ಕಾರ ಬದುಕಿಲ್ಲ. ಅವರವರ ರಾಜಕೀಯ ಮೇಲಾಟಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ‘ಕಿಲ್ಲರ್ ಕಾಂಗ್ರೆಸ್ ಸರ್ಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ನಿರಂತರವಾದ ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 1,800ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳಾಗಿವೆ. ಬಲೂನ್ ಮಾರಾಟಕ್ಕೆ ಬಂದಿದ್ದ ಬಾಲಕಿಯ ಮೇಲೆ ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿಯೇ ಅತ್ಯಾಚಾರ ಮತ್ತು ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಯಿತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಲಾಯಿತು. ಮೂಡುಬಿದಿರೆಯ ಉಪನ್ಯಾಸಕ ತನ್ನ ವಿದ್ಯಾರ್ಥಿನಿಯನ್ನ ಬೆಂಗಳೂರಿಗೆ ಕರೆತಂದು ಅತ್ಯಾಚಾರ ಎಸಗುತ್ತಾನೆ. ರಾಜ್ಯದಲ್ಲಿ ಜನರ ಪಾಲಿಗೆ ಸರ್ಕಾರ ಸತ್ತಿರುವುದರಿಂದ ಈ ರೀತಿಯ ಧೈರ್ಯ ಅಪರಾಧಿಗಳಿಗೆ ಬಂದಿದೆ. ಯಾರು ಸಿಎಂ ಆಗಬೇಕು, ಯಾರು ಡಿಸಿಎಂ ಆಗಬೇಕು, ಯಾರ ಮಂತ್ರಿಗಿರಿಯನ್ನ ಉಳಿಸಿಕೊಳ್ಳಬೇಕು, ಯಾರು ಮಂತ್ರಿಗಿರಿಯನ್ನ ಗಳಿಸಿಕೊಳ್ಳಬೇಕು ಎನ್ನುವುದರಲ್ಲಿಯೇ ರಾಜ್ಯ ಸರ್ಕಾರ ನಿರತವಾಗಿದೆ ಎಂದು ಹರಿಹಾಯ್ದರು.
ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಮೀಕ್ಷೆಯ ಒತ್ತಡ ತಾಳಲಾರದೇ ಕೆಲವರು ಬಿದ್ದು, ಇನ್ನೂ ಕೆಲವರು ಹೃದಯಾಘಾತದಿಂದ 6ಕ್ಕೂ ಅಧಿಕ ಜನ ಅಸುನೀಗಿದರು. 15ಕ್ಕೂ ಅಧಿಕ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಗುತ್ತಿಗೆದಾರರು ದಯಾಮರಣ ಕೋರಿ ಪತ್ರ ಬರದಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಯೇ ನಿಮ್ಮ ಸಾಧನೆ ಎಂದು ಮಾತನಾಡುತ್ತಿದ್ದೀರಿ, ನಮ್ಮ ಪ್ರಾಣಗಳಿಗೆ ಗ್ಯಾರಂಟಿ ಯಾರು? ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಹಿಡಿತವಿಲ್ಲದ ದುರ್ಬಲ ಗೃಹ ಸಚಿವರನ್ನಿಟ್ಟುಕೊಂಡು ರಾಜ್ಯ ನಡೆಸಲು ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು.



