Flash News

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರೀ ಪ್ಲಾನ್: NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎನ್ಐಎ ಜಾರ್ಜ್‌ಶೀಟ್‌ ಸಲ್ಲಿಸಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರೀ ಪ್ಲಾನ್ಡ್ ಆಗಿದ್ದು, ಮೊದಲೇ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಹತ್ಯೆ ದಿನ ಸುಹಾಸ್ ಶೆಟ್ಟಿಯನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದೆ ಎಂಬ ಭಯಾನಕ ವಿಚಾರಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣ ಕನ್ನಡದ ಬಜ್ಪೆಯ ಕಿನ್ನಿಪದವು ಜಂಕ್ಷನ್ ಬಳಿ 2025ರ ಮೇ 1ರಂದು ಸುಹಾಸ್ ಶೆಟ್ಟಿ ಹತ್ಯೆಯಾಗಿತ್ತು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತ 11 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಬುಧವಾರ ಚಾರ್ಜ್ ​​ಶೀಟ್ ಸಲ್ಲಿಸಿದೆ.

ಬಂಧಿತ ಆರೋಪಿಗಳಾದ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್, ನೌಶಾದ್, ಆದಿಲ್ ಮಹರೂಫ್, ಕಲಂದರ್ ಶಫಿ, ಎಂ.ನಾಗರಾಜ, ರಂಜಿತ್, ಮಹಮ್ಮದ್ ರಿಜ್ವಾನ್, ಅಜರುದ್ದೀನ್ ಮತ್ತು ಅಬ್ದುಲ್ ಖಾದರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ 1967, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಶಸ್ತ್ರಾಸ್ತ್ರ ಕಾಯ್ದೆ 1959ರ ವಿವಿಧ ವಿಭಾಗಗಳ ಅಡಿಯಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ದೋಷಾರೋಪ ಪಟ್ಟಿಯಲ್ಲಿರುವ ಮಾಹಿತಿ: ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಹಲವು ತಿಂಗಳುಗಳ ಕಾಲ ಆರೋಪಿಗಳು ಸೂಕ್ಷ್ಮವಾಗಿ ಗಮನಿಸಿದ್ದರು. 2025ರ ಮೇ 1ರಂದು ಮಾರಕಾಸ್ತ್ರಗಳ ಸಹಿತವಾಗಿ ಎರಡು ಕಾರುಗಳಲ್ಲಿ ಬಂದಿದ್ದ 7 ಆರೋಪಿಗಳು ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಹಿಂಬಾಲಿಸಿದ್ದರು. ಕಿನ್ನಿಪದವು ಬಳಿ ಉದ್ದೇಶಪೂರ್ವಕವಾಗಿ ಸುಹಾಸ್ ಶೆಟ್ಟಿಯ ಕಾರಿಗೆ ಅಪಘಾತವೆಸಗುವ ಮೂಲಕ ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದ್ದರು. ಬಳಿಕ ಕಾಲ್ನಡಿಗೆಯಲ್ಲಿ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಸುಹಾಸ್ ಶೆಟ್ಟಿಯನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದರು. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದ ಮಾಜಿ ಸದಸ್ಯ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಹಾಗೂ ನೌಶಾದ್ ಸೇರಿ ಹತ್ಯೆಯ ಸಂಚು ರೂಪಿಸಿದ್ದರು. ಈ ಕೃತ್ಯಕ್ಕಾಗಿ ಇತರರನ್ನ ನೇಮಿಸಿಕೊಳ್ಳಲು ಅಗತ್ಯವಿರುವ ಹಣವನ್ನು ಆದಿಲ್ ಮಹರೂಫ್ ಒದಗಿಸಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಆರೋಪಿ ಅಬ್ದುಲ್ ವಿರುದ್ಧ ತನಿಖೆ: ಸಮಾಜದಲ್ಲಿ ಭಯ ಹುಟ್ಟುಹಾಕಲು ಮತ್ತು ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ಸಾರ್ವಜನಿಕರ ಮುಂದೆಯೇ ಈ ಕೃತ್ಯ ನಡೆಸಲಾಗಿತ್ತು ಎಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಬಂಧಿತ ಮತ್ತೋರ್ವ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.