Flash News

ಸುರತ್ಕಲ್ | ಮುಸ್ಲಿಂ ಯುವಕರಿಬ್ಬರಿಗೆ ಚೂರಿ ಇರಿತ, ಬಜರಂಗದಳ ಕಾರ್ಯಕರ್ತ ಸೇರಿ ನಾಲ್ವರ ಕೃತ್ಯ

ಮಂಗಳೂರು: ಸುರತ್ಕಲ್‌ನಲ್ಲಿರುವ ದೀಪಕ್ ಬಾರ್ ಬಳಿ ಗುರುವಾರ ರಾತ್ರಿ ಯುವಕರಿಬ್ಬರಿಗೆ ಚೂರಿ ಇರಿದ ಘಟನೆ ನಡೆದಿದ್ದು, ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್, ಮುಕ್ಷಿದ್, ನಿಜಾಮ್ ಮತ್ತು ಇತರ ಇಬ್ಬರು ಸ್ನೇಹಿತರು ದೀಪಕ್ ಬಾರ್‌ಗೆ ತೆರಳಿದ್ದರು. ಇದೇ ವೇಳೆ, ಅಲ್ಲಿಗೆ ಬಂದಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳ ಜೊತೆ ಅವರಿಗೆ ವಾಗ್ವಾದ ಶುರುವಾಗಿದೆ. ಬಾರ್‌ನಿಂದ ಹೊರಬಂದ ನಂತರವೂ ಎರಡೂ ಗುಂಪುಗಳ ನಡುವೆ ಜಗಳ ಮುಂದುವರಿದಿದೆ.

ಈ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬ (ಗಾಯದ ಸ್ವರೂಪ ಗಮನಿಸಿದಾಗ ಫ್ಲೆಕ್ಸ್ ಕತ್ತರಿಸುವ ಚಾಕು ಎಂದು ಶಂಕಿಸಲಾಗಿದೆ) ನಿಜಾಮ್ ಅವರ ಹೊಟ್ಟೆಗೆ ಮತ್ತು ಕಿವಿಯ ಸಮೀಪ ಇರಿದಿದ್ದಾನೆ. ತಡೆಯಲು ಬಂದ ಸ್ನೇಹಿತ ಮುಕ್ಷಿದ್ ಅವರ ಕೈಗೂ ಗಾಯವಾಗಿದೆ. ಅದೃಷ್ಟವಶಾತ್ ಗಾಯ ಆಳವಾಗಿರದ ಕಾರಣ ನಿಜಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ (ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ

ರಾತ್ರಿಯೇ ಕಾರ್ಯಪ್ರವೃತ್ತರಾದ ಪೊಲೀಸರ ವಿಶೇಷ ತಂಡಗಳು ಆರೋಪಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿವೆ. ಸುರತ್ಕಲ್ ಠಾಣೆಯ ರೌಡಿ ಶೀಟರ್ ಹಾಗೂ ಬಜರಂಗದಳದಲ್ಲಿ ಸಕ್ರಿಯನಾಗಿರುವ ಗುರುರಾಜ್, ಆತನ ಸ್ನೇಹಿತ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿದ್ದ ಸ್ಥಳಕ್ಕೆ ಪೊಲೀಸರು ರಾತ್ರಿ ದಾಳಿ ನಡೆಸಿದರಾದರೂ, ಅಷ್ಟರಲ್ಲಾಗಲೇ ಅವರು ಅಲ್ಲಿಂದ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡಗಳು ಶೋಧ ಕಾರ್ಯ ಮುಂದುವರಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿವೆ. ಶುಕ್ರವಾರ ಬೆಳಿಗ್ಗೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ ಎಂದು ನಗರ ಪೊಲೀಸ್‌ ಆಯುಕ್ತರು ಹೇಳಿದ್ದಾರೆ.