ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಚಿಕ್ಕ ಮಕ್ಕಳ ಕತ್ತು ಕೊಯ್ದು ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟಪುರದಲ್ಲಿ ಶನಿವಾರ ನಡೆದಿದೆ.
ಬೆಟ್ಟದಪುರದ ಮುಸ್ಲಿಂ ಬ್ಲಾಕ್ ಎಂಬಲ್ಲಿ ಈ ದಾರುಣ ಘಟನೆ ನಡೆದಿದೆ. 22 ವರ್ಷದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ಮಹಿಳೆಗೆ ಮೂರು ವರ್ಷದ ಹೆಣ್ಣು ಮಗಳು ಹಾಗೂ 10 ದಿನದ ಹಸುಗೂಸು ಇತ್ತು.
ರಬಿಯಾ ಭಾನು ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಹಲವು ದಿನಗಳಿಂದ ಬೆಟ್ಟದಪುರದ ಮುಸ್ಲಿಂ ಬ್ಲಾಕ್ನಲ್ಲಿ ವಾಸವಿದ್ದರು. ಘಟನೆಗೆ ಕೌಟುಂಬಿಕ ಕಲಹ ಕಾರಣ ಇರಬಹುದೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಆದರೂ ರಬಿಯಾ ಭಾನು ತನ್ನ ಕೊಠಡಿಯ ಬಾಗಿಲನ್ನು ಹಾಕಿಕೊಂಡಿದ್ದರು. ಅನುಮಾನದ ಹಿನ್ನೆಲೆಯಲ್ಲಿ ಕೊಠಡಿಯ ಬಾಗಿಲನ್ನು ಒಡೆದು ನೋಡಿದಾಗ ವಿಷಯ ಗೊತ್ತಾಗಿದೆ. ಬಾಗಿಲನ್ನು ಒಡೆದು ನೋಡಿದಾಗ ಮಕ್ಕಳು, ತಾಯಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ಮೃತ ರಬಿಯಾ ಭಾನು ತಂದೆ ಜಮೃತ್ ಪಾಷಾ ದುಃಖ ತೋಡಿಕೊಂಡಿದ್ದಾರೆ.
ಅರೇಹಳ್ಳಿ ಗ್ರಾಮದ ಮುಸಬಿರ್ ಎಂಬಾತನಿಗೆ ಕಳೆದ ಮೂರು ವರ್ಷಗಳ ಹಿಂದೆ ರಬಿಯಾ ಭಾನುಳನ್ನು ಕೊಟ್ಟು ಮದುವೆ ಮಾಡಿಸಲಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹತ್ತು ದಿನಗಳ ಹಿಂದೆ ರಬಿಯಾ ಭಾನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು.



