ಜೆದ್ದಾ: ಸೌದಿ ಅರೇಬಿಯಾದ ನಜ್ರಾನ್ ಅಭಾ ಹೆದ್ದಾರಿಯಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರಿನಲ್ಲಿದ್ದ ಇಬ್ಬರು ಮೃತರಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತರಲ್ಲಿ ಓರ್ವ ಮಂಗಳೂರು ಸಮೀಪದ ಕುಂದಾಪುರದ ನಿವಾಸಿ 25 ವರ್ಷ ಪ್ರಾಯದ ಅಮ್ಮಾರ್ ಅಹ್ಮದ್ ಶೇಖ್ ಎಂದು ತಿಳಿದು ಬಂದಿದ್ದು, ಇನ್ನೋರ್ವ ಕೇರಳದ ಯುವಕನಾಗಿದ್ದಾನೆ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದರು. ಸೌದಿ ಪ್ರಜೆಯ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತರ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಫಘಾತ ನಡೆದ ಸ್ಥಳಕ್ಕೆ ತೆರಳಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶೈತ್ಯಾಗಾರದಲ್ಲಿಡಲಾಗಿದೆ. ಅಧಿಕೃತ ಮೂಲಗಳ ಪ್ರಕಾರ ಅಮ್ಮಾರ್ ಅಹ್ಮದ್ ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಸೌದಿ ಅರೇಬಿಯಾದಲ್ಲೇ ನೆರವೇರಿಸಲಾಗುವುದು ಎಂದು ತಿಳಿದು ಬಂದಿದ್ದು,ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.



