Flash News

ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ: ಶೋಭಾ ಕರಂದ್ಲಾಜೆ

ನಂಜನಗೂಡು: ಆಧ್ಯಾತ್ಮಿಕತೆ ಭಾರತ ದೇಶದ ಆತ್ಮ, ನಮ್ಮ ದೇಶದ ಸಂಸ್ಕೃತಿ ಮತ್ತು ಧರ್ಮ ಆಚಾರ, ವಿಚಾರವನ್ನು ಸಂರಕ್ಷಿಸುತ್ತಿರುವ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾಮೇಳ ಮತ್ತು ದೇಶಿ ಆಟಗಳು ಸೋಬಾನೆ ಪದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಅಸ್ತಿತ್ವವಿರುವುದು ಆಧ್ಯಾತ್ಮಿಕತೆಯಲ್ಲಿ, ಆಧ್ಯಾತ್ಮಿಕತೆ ಇಲ್ಲದೆ ಭಾರತವಿಲ್ಲ, ನಮ್ಮ ಸಂಸ್ಕೃತಿ, ಧರ್ಮ, ಆಚಾರ, ವಿಚಾರ, ನಮ್ಮ ದೇವಾಲಯಗಳಲ್ಲಿದೆ, ದೇಶದಲ್ಲಿ ಶಾಂತಿ ನೆಲೆಸಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ, ದೇಶದಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ದೊಡ್ಡ ಕೆಲಸವನ್ನು ಮಠಮಾನ್ಯಗಳು ನಿರ್ವಹಿಸುತ್ತಿವೆ, ಪುಸ್ತಕದ ಶಿಕ್ಷಣದ ಜೊತೆಗೆ ಜನರಿಗೆ ಮೌಲ್ಯದ ಶಿಕ್ಷಣವನ್ನು ನೀಡುತ್ತಿವೆ, ಆದ್ದರಿಂದ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ, ದೇಶದ ಉಳಿವಿನ ಜೊತೆಗೆ ನಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕಿದೆ, ನಮ್ಮ ಮುಂಬರುವ ಪೀಳಿಗೆಗೂ ಸಹ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.

ಬುದ್ಧಿಯನ್ನು ಕೊಂಡೊಯ್ಯುವ ಯಾತ್ರೆಯಾಗಿದೆ

ಸುತ್ತೂರು ಜಾತ್ರೆಗೆ ಬರುವುದೇ ಖುಷಿಯ ಸಂಗತಿ ಮತ್ತು ಹೆಮ್ಮೆಯಾಗಿದೆ. ಸುತ್ತೂರು ಜಾತ್ರೆ ಖರೀದಿಯ ಜೊತೆಗೆ ಬುದ್ದಿಯನ್ನು ಕೊಂಡೊಯ್ಯುವ ಯಾತ್ರೆಯಾಗಿದೆ, ಶ್ರೀ ಮಠವು ಧಾರ್ಮಿಕ ಕೈಂಕರ್ಯದ ಜೊತೆಗೆ ಈ ಭಾಗದ ಗ್ರಾಮೀಣ ಭಾಗದ ಜನರಿಗೆ ಅವಶ್ಯವಿರುವ ಜ್ಞಾನವನ್ನು ಹಂಚುವ ಕೆಲಸವನ್ನು ಶ್ರೀ ಮಠವು ನಡೆಸುತ್ತಿದೆ ಎಂದು ಹೇಳಿದರು.

ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಿದೆ

ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸುತ್ತೂರು ಮಠವು ಶಿಕ್ಷಣ ದಾಸೋಹ ಆಧ್ಯಾತ್ಮಿಕತೆಯನ್ನು ಮೀರಿ ದೇಶಕ್ಕೆ ಅನ್ನ ಕೊಡುವ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಿದೆ, ಶ್ರೀಗಳ ದೂರ ದೃಷ್ಟಿಯ ಫಲವಾಗಿ ನಾನು ನೀರಾವರಿ ಸಚಿವನಾಗಿದ್ದ ವೇಳೆ ಸುತ್ತೂರು ಶ್ರೀಗಳ ಸಲಹೆಯಂತೆ ಚಾಮರಾಜನಗರ ಭಾಗದ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದೇನೆ.