Flash News

ಒಡಹುಟ್ಟಿದ ಸಹೋದರಿಗೆ ಮಗು‌ ಕರುಣಿಸಿದ ಪಾಪಿ ಅಣ್ಣ ಅರೆಸ್ಟ್‌

ಕೊಪ್ಪಳ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ಸಹೋದರನೇ ಮಗು ಕರಣಿಸಿದ್ದಾನೆ.

ಕಳೆದ ವಾರ ತೀವ್ರ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇಡೀ ಕುಟುಂಬಕ್ಕೆ, ಆ ಬಾಲಕಿ ತಾಯಿ ಆಗಿದ್ದಾಳೆ ಎಂಬ ವಿಷಯದಿಂದ ಆಘಾತವಾಗಿದೆ. ಆದರೆ, ಮಗುವಿಗೆ ಜನ್ಮ ನೀಡಿದ ನಂತರ, ಆ ಬಾಲಕಿ ನೀಡಿದ ಹೇಳಿಕೆಯು ಮತ್ತೊಂದು ದೊಡ್ಡ ಸತ್ಯವನ್ನು ಬಯಲು ಮಾಡಿದೆ.

ಆ ಅಪ್ರಾಪ್ತ ಬಾಲಕಿ ನೀಡಿದ ದೂರಿನನ್ವಯ, ಈ ಕೃತ್ಯ ಎಸಗಿದವರು ಬೇರೆ ಯಾರೂ ಅಲ್ಲ, ಆಕೆಯ ಸ್ವಂತ ಅಣ್ಣನೇ ಎಂಬುದು ಗೊತ್ತಾಗಿದೆ. ಈ ವಿಷಯ ತಿಳಿದ ಕೂಡಲೇ, ಕೊಪ್ಪಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. 21 ವರ್ಷದ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.