ಮಂಗಳೂರು: ಸರ್ವಧರ್ಮದವರು ಪಾಲ್ಗೊಳ್ಳುವ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರು ಜುಮಾ ಮಸೀದಿಯ ಮಾಲಿದಾ ಉರುಸ್ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನೇ ಮಾದರಿಯನ್ನಾಗಿ ತೋರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿರುವ ಮಸೀದಿಯಲ್ಲಿ ಇತಿಹಾಸ ಪ್ರಸಿದ್ಧ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಮಾಲಿದಾ ಉರೂಸ್ ಈ ಕೋಮುಸೌಹಾರ್ದತೆಗೆ ಉತ್ತಮ ಉದಾಹರಣೆ.
ಕ್ರಿ.ಶ 13ನೇ ಶತಮಾನದಲ್ಲಿ ಇರಾನ್ನ ಪೂರ್ವಭಾಗ ಹಾಗೂ ಅಫಘಾನಿಸ್ತಾನದ ಪಶ್ಚಿಮ ಭಾಗದ ಸೀಸ್ತಾನ್ ಎಂಬಲ್ಲಿ ರಾಜನಾಗಿ ಜನಹಿತ ಕಾರ್ಯಗಳೊಂದಿಗೆ ರಾಜ್ಯಭಾರ ನಡೆಸಿದ ಹಝ್ರತ್ ಸಯ್ಯದ್ ಬಾಬಾ ಫಕ್ರುದ್ಧೀನ್ ವಲಿ ಅವರು ದೇವರ ಧ್ಯಾನಕ್ಕೆ ಮತ್ತು ಜನರ ಕಲ್ಯಾಣಕ್ಕಾಗಿ ಜೀವನ ಮೀಸಲಿಡಬೇಕೆಂಬ ಉದ್ದೇಶದೊಂದಿಗೆ ರಾಜ್ಯವನ್ನು ತ್ಯಜಿಸಿ ವಿವಿಧ ದೇಶಗಳಲ್ಲಿ ಸಂಚರಿಸುತ್ತಾ ಭಾರತಕ್ಕೆ ಬಂದಿದ್ದರು.
ಅಜಿಲಮೊಗರು ತಲುಪಿದ ಅವರು ಬಡವರನ್ನು ಸಂಕಷ್ಟದ ಕೂಪದಿಂದ ಮೇಲೆತ್ತುವ ಕೆಲಸ ಮಾಡಿದರು. ಅಂಧಕಾರ, ಅನಾಚಾರ, ದುರ್ಗುಣಗಳಿಂದ ಜನರನ್ನು ವಿಮುಕ್ತಿಗೊಳಿಸುವ ಭೋದನೆಗಳನ್ನು ಮಾಡಿದ ಅವರು ಪವಾಡಗಳ ಮೂಲಕ ಜಾತಿಮತ ಭೇದವಿಲ್ಲದೆ ಕಷ್ಟಗಳಿಗೆ ಪರಿಹಾರ ನೀಡುತ್ತಿದ್ದರು. ಅಜಿಲಮೊಗರು ಮಸೀದಿಯನ್ನು ಸ್ಥಾಪಿಸಿದರು. ನಂತರ ಆಂಧ್ರಪ್ರದೇಶದ ಪೆನಕುಂಡಕ್ಕೆ ತೆರಳಿ ಸಾಮಾಜಿಕ ಚಟುವಟಿಕೆ ಮಾಡುತ್ತ ಕ್ರಿ.ಶ 1294ರಲ್ಲಿ ಕೊನೆಯುಸಿರೆಳೆದರು ಎಂದು ಇತಿಹಾಸ ಹೇಳುತ್ತಿದೆ.

ಈ ಬಾರಿ 753ನೇ ಉರೂಸ್ ನಡೆಯುತ್ತಿದೆ. ಈ ಉರೂಸ್ ಕಾರ್ಯಕ್ರಮದಲ್ಲಿ ಮಾಲಿದಾ ಎಂಬ ಪ್ರಸಾದ ನೀಡುವುದು ವಿಶೇಷ. ಈ ಪ್ರಸಾದ ತಯಾರಿ ಮತ್ತು ಸ್ವೀಕಾರದಲ್ಲಿ ಭಾವೈಕ್ಯತೆಯೇ ತುಂಬಿಕೊಂಡಿದೆ.

ಬಂಟ್ವಾಳ ತಾಲೂಕಿನ ಅಜಿಲಮೊಗರುವಿನ ಮಸೀದಿಯು ಇಲ್ಲಿನ ನೇತ್ರಾವತಿ ನದಿ ತಟದಲ್ಲಿದೆ. ಈ ನದಿಯ ಒಂದು ಭಾಗದಲ್ಲಿ ಅಜಿಲಮೊಗರು ಮಸೀದಿ ಇದ್ದರೆ, ಮತ್ತೊಂದು ಭಾಗದಲ್ಲಿ ಲಕ್ಷ್ಮಿ ನರಸಿಂಹ ದೇವಸ್ಥಾನ ಇದೆ. ಇದೀಗ ಮಸೀದಿ ಮತ್ತು ದೇವಸ್ಥಾನ ಮಧ್ಯೆ ಇರುವ ನದಿಗೆ ಸೇತುವೆ ಕಟ್ಟಲಾಗುತ್ತಿದ್ದು, ಇದಕ್ಕೆ ಸೌಹಾರ್ದ ಸೇತುವೆ ಎಂದು ಹೆಸರಿಸಲಾಗಿದೆ. ಇಲ್ಲಿ ಕೋಮು ಗಲಭೆ, ಕೋಮು ವೈಷಮ್ಯ ಘಟನೆಗಳು ನಡೆದಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ್ ಹೇಳಿದ್ದಾರೆ.
ವಿಶ್ವನಾಥ್ ಶೆಟ್ಟಿ ಮಾತನಾಡಿ, ‘ಇಲ್ಲಿನ ಜಾಗ ನಮಗೆ ಪವಿತ್ರವಾದುದು. ಮುಸ್ಲಿಮರಿಗಿಂತ ನಾವು ಹಿಂದೂಗಳು ಹೆಚ್ಚು ಪೂಜಿಸುತ್ತೇವೆ. ನಮ್ಮ ಮಕ್ಕಳಿಗೆ ಹುಷಾರಿಲ್ಲದಾಗ ಇಲ್ಲಿನ ಗುರುಗಳು ಪ್ರಾರ್ಥಿಸಿ ಒಂದು ನೂಲು ಕಟ್ಟಿದರೆ ಸಂಪೂರ್ಣ ಗುಣವಾಗುತ್ತದೆ. ನಾನು 60 ವರ್ಷದಿಂದ ಈ ಪ್ರಸಾದವನ್ನು ಪಡೆಯುತ್ತಿದ್ದೇನೆ’ ಎಂದಿದ್ದಾರೆ.
ಏನಿದು ಮಾಲಿದಾ? : ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರ ಪ್ರಿಯವಾದ ಸಿಹಿ ತಿಂಡಿ ಮಾಲಿದಾವನ್ನು ಮಸೀದಿಯಿಂದ ತಯಾರಿಸಿ ವಿತರಿಸಲಾಗುತ್ತದೆ. ಮಾಲಿದಾ ಎಂದರೆ ಅಕ್ಕಿರೊಟ್ಟಿಯನ್ನು ದಪ್ಪ ಮಟ್ಟದಲ್ಲಿ ತಯಾರಿಸಿ, ಅದಕ್ಕೆ ಬೆಲ್ಲ ಮತ್ತು ತುಪ್ಪ ಹಾಕಿ, ಕುದಿಸಿ ಮಾಡಿದ ಸಿಹಿತಿಂಡಿ. ಇದನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಎರಡನೇ ಹಂತದಲ್ಲಿ ಊರು, ಪರವೂರಿನ ಮುಸ್ಲಿಮರು ತಮ್ಮ ಮನೆಯಲ್ಲಿ ಮಾಲಿದಾ ತಯಾರಿಸಿ ಮಸೀದಿಗೆ ನೀಡುತ್ತಾರೆ. ಹೀಗೆ, ಮುಸ್ಲಿಮರು ತಮ್ಮ ಮನೆಯಲ್ಲಿ ತಯಾರಿಸುವ ಮಾಲಿದಾಕ್ಕೆ ಹಿಂದೂ ಭಕ್ತರು ಅದಕ್ಕೆ ಬೇಕಾದ ವಸ್ತುಗಳನ್ನು ನೀಡುತ್ತಾರೆ.

ಅಜಿಲಮೊಗರು ರಾಜ್ಯಕ್ಕೆ ಮಾದರಿಯಾಗಿದೆ. ಸರ್ವಧರ್ಮದವರು ಪಾಲ್ಗೊಳ್ಳುವ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರು ಜುಮಾ ಮಸೀದಿಯ ಮಾಲಿದಾ ಉರುಸ್ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನೇ ಮಾದರಿಯನ್ನಾಗಿ ತೋರಿಸಿದೆ.





