ನವದೆಹಲಿ: ಭಾರತದ ನ್ಯೂಸ್ ಚಾನೆಲ್ಗಳು ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ನ್ಯೂಸ್ ಚಾನೆಲ್ಗಳಾಗಿವೆ ಎಂದು ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಎನ್. ರಾಮ್ ಹೇಳಿದ್ದಾರೆ. ದಿ ವಯರ್ ವೆಬ್ ಪೋರ್ಟಲ್ನಲ್ಲಿ ಕರಣ್ ಥಾಪರ್ ಜೊತೆ ನಡೆಸಿದ ಮಾತುಕತೆಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಹಾರ ಚುನಾವಣೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಅಥವಾ ಗೃಹ ಸಚಿವ ಬಿಹಾರದಲ್ಲಿ ಯಾವುದಾದರೂ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರೆ ಅದನ್ನು ರಾಷ್ಟ್ರೀಯ ಟಿವಿ ಚಾನಲ್ಗಳು ನೇರ ಪ್ರಸಾರ ಮಾಡಿವೆ. ಅವರು ಒಂದು ರ್ಯಾಲಿಯಲ್ಲಿ ಆಡಿರುವ ಮಾತನ್ನು ಇನ್ನೊಂದು ರ್ಯಾಲಿಯಲ್ಲಿಯೂ ಆಡಿದ್ದಾರೆ. ಹಾಗಿದ್ದು ಅದನ್ನು ಪೂರ್ಣ ನೇರ ಪ್ರಸಾರದಲ್ಲಿ ತೋರಿಸಲಾಗಿದೆ. ಇದು ಗುಲಾಮತನವಲ್ಲದೆ ಮತ್ತೇನು ಎಂದವರು ಪ್ರಶ್ನಿಸಿದ್ದಾರೆ.
ಸರ್ಕಾರ ಮತ್ತು ಚಾನೆಲ್ಗಳ ನಡುವಿನ ಅಪವಿತ್ರ ಸಂಬಂಧದ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಪವಿತ್ರ ಸಂಬಂಧವನ್ನು ಬಿಹಾರ ಮತ್ತೆ ಎತ್ತಿ ತೋರಿಸಿದೆ ಎಂದವರು ಹೇಳಿದ್ದಾರೆ.
ನುಸುಳುಕೋರರು ಮತ್ತು ಅತಿಕ್ರಮಣ ಕೋರರು ದೇಶದೊಳಗೆ ಪ್ರವೇಶಿಸಿ ಮತದಾರರಾಗಿ ಪರಿವರ್ತನೆಯಾಗುತ್ತಿದ್ದಾರೆ ಎಂದು ಪ್ರಧಾನಿ ಮತ್ತು ಗೃಹ ಸಚಿವರು ಹೇಳುತ್ತಿರುವಾಗಲೂ ಅದು ಮುಸ್ಲಿಮರಿಗೆ ವಿರುದ್ಧವಾಗಿರುವ ಧರ್ಮ ದ್ವೇಷದ ಮಾತು ಎಂದು ಗೊತ್ತಾಗಿಯೂ ಭಾರತೀಯ ಮಾಧ್ಯಮಗಳು ಅದನ್ನು ಪ್ರಶ್ನಿಸದೆ ಇರುವುದಕ್ಕೂ ಅವರು ಆಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಗಂಭೀರ ಲೋಪವಾಗಿದೆ. ಇದನ್ನು ಪ್ರಶ್ನಿಸುವ ಖಂಡಿಸುವ ವಿಷಯದಲ್ಲಿ ಭಾರತೀಯ ಮಾಧ್ಯಮಗಳು ವಿಫಲವಾಗಿರುವುದು ಗುಲಾಮತನದ ಸಂಕೇತ ಎಂದು ಅವರು ಹೇಳಿದ್ದಾರೆ.



