Flash News

ಪೌರಾಯುಕ್ತೆಗೆ ಧಮ್ಕಿ ಕೇಸ್‌: ಖಾಕಿ ಕೈಗೆ ಸಿಗದ ಕಾಂಗ್ರೆಸ್ಸಿಗ!

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಗೌಡ ಅವರಿಗೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಧಮ್ಕಿ ಪ್ರಕರಣ ಸಂಬಂಧ ಪ್ರತ್ಯೇಕವಾಗಿ 2 ದೂರುಗಳು ದಾಖಲಾಗಿ 3 ದಿನ ಕಳೆದರೂ ಇನ್ನೂ ಆತನ ಬಂಧನ ಸಾಧ್ಯವಾಗಿಲ್ಲ.

ರಾಜೀವ್‌ಗೌಡ ಬಂಧನಕ್ಕಾಗಿ ಎಸ್ಪಿ ಕುಶಲ್ ಚೌಕ್ಸೆ, ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಪಿ.ಮುರಳೀಧರ್ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ಠಾಣೆ ಸಿಪಿಐ ಆನಂದ್ ಕುಮಾರ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಿ ವಿವಿಧೆಡೆ ಬುಧವಾರದಿಂದಲೇ ಕಾರ್ಯಾಚರಣೆಗೆ ಇಳಿದರೂ ರಾಜೀವ್‌ಗೌಡ ಬಂಧನ ಪೊಲೀಸರಿಗೆ ಸವಾಲಾಗಿದೆ.

ಶಿಡ್ಲಘಟ್ಟ ಠಾಣೆಯಲ್ಲಿ ನಗರಸಭೆ ಆಯುಕ್ತೆ ಅಮೃತಗೌಡ ನೀಡಿರುವ ದೂರಿನಂತೆ ರಾಜೀವ್‌ಗೌಡ ವಿರುದ್ಧ ಕಲಂ 132, 351(3), 224,56, 352 ಬಿಎನ್‌ಎಸ್ -2023 ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ವಿರುದ್ಧ ಕೂಡ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರ ಹಿನ್ನಲೆಯಲ್ಲಿ ಜೆಡಿಎಸ್ ತಾಲೂಕು ಉಪಾಧ್ಯಕ್ಷ ಎನ್.ಸಿ.ಶ್ರೀನಿವಾಸಗೌಡ ದೂರಿನ ಮೇರೆಗೆ ಮತ್ತೊಂದು ಪ್ರಕರಣವನ್ನು ಪೊಲೀಸರು ಕಲಂ 352, 353(2), ಬಿಎನ್ ಎಸ್ ರೀತ್ಯಾ ಪ್ರಕರಣ ದಾಖಲಿಸಿದ್ದರು. ರಾಜೀವ್‌ಗೌಢ ಬಂಧನಕ್ಕೆ ಪೊಲೀಸರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನ ಅವರ ನಿವಾಸ, ಸಂಬಂಧಿಕರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದರೂ ಆತನ ಸುಳಿವು ಪತ್ತೆ ಆಗಿಲ್ಲ. ತನ್ನ 2 ಮೊಬೈಲ್‌ಗಳನ್ನು ರಾಜೀವ್‌ ಗೌಡ ಸ್ವಿಚ್ ಆಫ್‌ ಮಾಡಿಕೊಂಡಿದ್ದಾನೆ.

ಕೊನೇ ಸಂಪರ್ಕ ಮಾಡಿದವರಿಗೆ ಖಾಕಿ ವಿಚಾರಣೆ:
ಪ್ರಕರಣದ ನಂತರ ಕೊನೆಯದಾಗಿ ರಾಜೀವ್‌ಗೌಡನನ್ನು ಸಂಪರ್ಕ ಮಾಡಿದ ಕಾಂಗ್ರೆಸ್ ಮುಖಂಡರು, ಮಾಧ್ಯಮದವರನ್ನು ಶಿಡ್ಲಘಟ್ಟ ಠಾಣೆ ಪೊಲೀಸರು ಶುಕ್ರವಾರ ಠಾಣೆಗೆ ಕರೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಕ್ಷಮೆ ಕೋರಿ ರಾಜೀವ್‌ಗೌಡ ನಾಪತ್ತೆ:
ಕಳೆದ ಬುಧವಾರ ಸಂಜೆ ರಾಜೀವ್‌ಗೌಡ ವಿರುದ್ಧ 2 ಎಫ್‌ಐಆರ್‌ಗಳು ದಾಖಲಾಗಿವೆ. ಆ ನಂತರ ರಾಜೀವ್‌ಗೌಡ ಬೆಂಗಳೂರಿನಲ್ಲಿ ಅಮೃತಗೌಡ ಅವರಿಗೆ ಕ್ಷಮೆ ಕೋರಿರುವ ವಿಡಿಯೋ ರಿಲೀಸ್ ಮಾಡಿ, ನಂತರ ತಲೆ ಮರೆಸಿಕೊಂಡಿದ್ದಾನೆ.