ಉಡುಪಿ : ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಸಿಎಂ ಆಗಬೇಕು ಎಂದು ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯು.ಟಿ ಖಾದರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದನ್ನು ನೋಡಲು ಇಚ್ಛಿಸುತ್ತೇನೆ. ಇದು ನನ್ನ ಕನಸು. ಮಾತ್ರವಲ್ಲ ಇದನ್ನು ನನಸಾಗಿಸಿಗಲು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಕರ್ನಾಟಕದ ವಿಧಾನಸಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವವರು ಯುಟಿ ಖಾದರ್ ಎನ್ನುವ ಮೂಲಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ಭಾಷಣ ಆರಂಭಿಸಿದ್ದರು. ಖಾದರ್ ಒಬ್ಬ ಉದಾತ್ತ ರಾಜಕಾರಣಿ. ಅವರ ತಂದೆ ಯು.ಟಿ ಫರೀದ್ ಕೂಡ ದಯಾಳು ನಾಯಕರಾಗಿದ್ದರು. ಖಾದರ್ ಕೂಡ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ಅದೇ ಮಾದರಿಯ ರಾಜಕೀಯ ನಡವಳಿಕೆಗಳನ್ನು ಹೊಂದಿದ್ದಾರೆ. ಅವರು ರಾಜಕೀಯ ಜೀವನದಲ್ಲಿ ಮತ್ತಷ್ಟು ಬೆಳೆಯಬೇಕು. ಅವರು ಸಚಿವರಾರಬೇಕು. ಮಾತ್ರವಲ್ಲ ಮುಂದೊಂದು ದಿನ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಅವರನ್ನು ನೋಡುವುದು ಕೂಡ ನನ್ನ ಕನಸು. ಇದಕ್ಕಾಗಿ ನಾವು ಜಗತ್ತಿನ ಸರ್ವಶಕ್ತಿಗಳಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸುರೇಶ್ ಶೆಟ್ಟಿ ಅವರ ಈ ಹೇಳಿಕೆಯು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ಸುರೇಶ್ ಶೆಟ್ಟಿ ಒಬ್ಬ ಬಿಜೆಪಿ ನಾಯಕರಾಗಿ ಈ ರೀತಿ ಬೇರೆ ಸಮುದಾಯದ, ಬೇರೆ ಪಕ್ಷದ ರಾಜಕೀಯ ನಾಯಕರನ್ನು ಬಹಿರಂಗವಾಗಿ ಹೊಗಳುವುದು ಎಷ್ಟು ಸರಿ ? ನಿಮ್ಮ ಆಲೋಚನೆಗಳು ಈ ರೀತಿ ಇರುವಾಗ ತಳಮಟ್ಟದ ಕಾರ್ಯಕರ್ತರನ್ನೇಕೆ ನೀವು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವಂತಹ ಕಾರ್ಯ ಮಾಡುತ್ತಿದ್ದೀರಿ ? ಎಂದು ಪ್ರಶ್ನೆ ಮಾಡಿದ್ದಾರೆ.



