ಮಂಡ್ಯ: ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಯನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹೊರಗಿನವರು ಬಂದು ಸುಳ್ಳು ಹೇಳಿದ್ದಾರೆ. ಇವರು ಡಿಸೆಂಬರ್ 6 ಗೊತ್ತಾ, ಮಸೀದಿ ಕೆಡವಿಬಿಡುತ್ತೇವೆ ಎಂದರೆ, ನಾವು ಕೈಗೆ ಬಳೆ ಹಾಕಿಕೊಂಡು ಕೂತಿದ್ದೀವಾ? ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಾನ್ ಸವಾಲು ಹಾಕಿದ್ದಾರೆ. ಜೊತೆಗೆ, ಸಂಕೀರ್ತನ ಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಹಾಕುವಂತೆ ಪಟ್ಟು ಹಿಡಿದಿದ್ದಾರೆ.
ಶುಕ್ರವಾರದ ನಮಾಜ್‌ಗಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಅಬ್ದುಲ್ ರಜಾಕ್, ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರ ಸೂಚನೆಯಂತೆ ನೇರವಾಗಿ ಠಾಣೆಗೆ ಆಗಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಕೀರ್ತನ ಯಾತ್ರೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆಗಬೇಕು. ಅಲ್ಲಿವರೆಗೆ ನಾನು ಹೋಗುವುದಿಲ್ಲ. ಈವರೆಗೆ ಪ್ರಚೋದನೆ ಮಾಡಿದವರ ಮೇಲೆ ಎಫ್‌ಐಆರ್ ಯಾಕೆ ಹಾಕಿಲ್ಲ. ಇದರ ಬಗ್ಗೆ ನಾನು ಈಗಾಗಲೇ ದೂರು ಕೊಟ್ಟಿದ್ದೇನೆ. ಇಂದು ಶುಕ್ರವಾರ ನಮಾಜ್ ಇಲ್ಲಿಯೇ ಮಾಡಲು ಬಂದಿದ್ದೆ. ಅಲ್ಲಿ ಜನ ಜಾಸ್ತಿ ಇದ್ದರು ಅಂತ ನನ್ನನ್ನ ಠಾಣೆಗೆ ಬರಲು ಹೇಳಿದರು. ಈಗ ಠಾಣೆಗೆ ಬಂದಿದ್ದೇನೆ ಎಫ್‌ಐಆರ್ ಆಗಬೇಕು. ನಾನು ಶಾಂತಿ ಭಂಗ ಮಾಡಲು ಬಂದಿಲ್ಲ. ಇವರು ಎಫ್‌ಐಆರ್ ಮಾಡದಿದ್ದರೆ ಕೋರ್ಟ್ ಮೂಲಕ ಎಫ್‌ಐಆರ್ ಮಾಡಿಸುತ್ತೇನೆ ಎಂದು ತಿಳಿಸಿದರು.
ನಾವು ಶ್ರೀರಂಗಪಟ್ಟಣಕ್ಕೆ ಬೆಂಕಿ ಹಚ್ಚಲು ಬಂದಿಲ್ಲ. ಬೆಂಕಿ ಹಾರಿಸಲು ಬಂದಿದ್ದೇವೆ. ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಅವರ ಧಾರ್ಮಿಕ ಆಚರಣೆ. ಅದನ್ನು ಮಾಡಿಕೊಂಡರೆ ನಮ್ಮದೇನು ಅಭ್ಯಂತರ ಇಲ್ಲ. ಸ್ಥಳೀಯರು ಏನೂ ಮಾತಾಡಿಲ್ಲ, ಹೊರಗಿದ್ದ ಬಂದವರು ಪ್ರಚೋದನ ಭಾಷಣ ಮಾಡಿದ್ದಾರೆ. ಇದು ರಾಜಕಾರಣಕ್ಕಾಗಿ ನಡೆಯುತ್ತಿದೆ. ಇಲ್ಲಿ ಸಂಕೀರ್ತನಾ ಯಾತ್ರೆ ಮಾಡಿಕೊಂಡು ಹೋಗುವುದನ್ನು ಬಿಟ್ಟು, ಡಿಸೆಂಬರ್ 6 ಗೊತ್ತಾ, ಮಸೀದಿ ಕೆಡವಿ ಬಿಡುತ್ತೇವೆ ಎಂದರೆ ನಾವು ಕೈಗೆ ಬಳೆ ಹಾಕೊಂಡು ಕೂತಿದ್ದೀವಾ? ಎಂದು ಸವಾಲು ಹಾಕಿದರು.



