ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗೆ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ನಾಯಕತ್ವದ ಕುರಿತು ಹೊಸ ಚರ್ಚೆಯೊಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಮತ್ತು ವಿರೋಧ ಹೇಳಿಕೆಗಳು ಮುನ್ನೆಲೆಗೆ ಬಂದಿವೆ. ಪ್ರಸ್ತುತ ಸಿದ್ದರಾಮಯ್ಯನವರೇ ಅಹಿಂದ ಸಮುದಾಯದ ನಿರ್ವಿವಾದ ನಾಯಕರಾಗಿರುವಾಗ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮುಂದಿನ ನಾಯಕ ಎಂದು ಬಿ.ಕೆ. ಹರಿಪ್ರಸಾದ್ ಅವರು ಬೆಂಬಲಿಸಿ ನೀಡಿದ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಬಳಗದ ಪ್ರಮುಖ ನಾಯಕರಾದ ಬೈರತಿ ಸುರೇಶ್ ಅವರು, ‘ಈಗ ನಮ್ಮ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಕಿಂಗ್. ಕಿಂಗ್ ಇಸ್ ಎ ಲೈವ್ (ರಾಜ ಜೀವಂತವಾಗಿದ್ದಾರೆ). ಹೀಗಿರುವಾಗ ಬೇರೆ ನಾಯಕತ್ವದ ಬಗ್ಗೆ ಚರ್ಚೆ ಅನಗತ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಬಿ.ಕೆ. ಹರಿಪ್ರಸಾದ್ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ನಾಯಕನಾಗಿ ಯಾರು ಇರಬೇಕು, ಮುಂದಿನ ನಾಯಕರಾಗಿ ಯಾರು ಬರಬೇಕು ಎಂಬುದನ್ನು ಸ್ವತಃ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು’ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ಒತ್ತಿ ಹೇಳಿದರು.
ಮುಂದಿನ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಕುರಿತೂ ಪ್ರತಿಕ್ರಿಯಿಸಿದ ಬೈರತಿ ಸುರೇಶ್, ‘ಅದು ಯತೀಂದ್ರ ಅವರ ವೈಯಕ್ತಿಕ ಅಭಿಪ್ರಾಯ. ಒಬ್ಬ ಮಗನಾಗಿ ಅಂತಹ ಭಾವನೆಯಿಂದ ಮಾತನಾಡುವುದು ಸಹಜ. ಆದರೆ, ನಾಯಕತ್ವದ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಸವಾಲು ಒಡ್ಡುವುದು ಅಥವಾ ಹೊಸ ನಾಯಕತ್ವದ ಕುರಿತು ಅನಗತ್ಯ ಚರ್ಚೆ ನಡೆಸುವುದು ಪಕ್ಷಕ್ಕೆ ಒಳ್ಳೆಯದಲ್ಲ ಎಂಬ ಸಂದೇಶವನ್ನು ಬೈರತಿ ಸುರೇಶ್ ರವಾನಿಸಿದರು.


