ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂಬ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದ ಘಟನೆ ಕಲಾಪದ ದಿಕ್ಕನ್ನೇ ಬದಲಿಸಿತು.
ಸದನದಲ್ಲಿ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ, ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂದು ನೀಡಿದ ಹೇಳಿಕೆ ಸದನದಲ್ಲಿ ಕಿಚ್ಚು ಹಚ್ಚಿತು.
ಈ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ‘ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್ ಅವರು ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನೇ ಪ್ರಶ್ನಿಸಿ, ‘ನೀವೂ ಕರಾವಳಿಯವರಲ್ಲವೇ? ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ? ಪೀಠದಿಂದ ಹೊರಗೆ ಬನ್ನಿ’ ಎಂದು ಸವಾಲು ಹಾಕಿದರು. ಸ್ಪೀಕರ್ ಅವರು ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರೂ ಬಿಜೆಪಿ ಶಾಸಕರು ಸಮಾಧಾನಗೊಳ್ಳದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ವನ್ನು (Hate Speech Bill) ಅಂಗೀಕರಿಸಿದರು. ಈ ಕ್ರಮದಿಂದ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ‘ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.



