Flash News

ಸೌದಿಯ ಆಕಾಶ ಕ್ರೀಡಾಂಗಣದಲ್ಲಿ ನಡೆಯಲಿದೆ ಫಿಫಾ ವಿಶ್ವಕಪ್ !

ರಿಯಾದ್‌: ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಮೈಲುಗಲ್ಲಾಗಲಿರುವ ಸೌದಿ ಅರೇಬಿಯಾ, ವಿಶ್ವದ ಮೊದಲ ‘ಆಕಾಶ ಕ್ರೀಡಾಂಗಣ’ ನಿರ್ಮಾಣ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಭವಿಷ್ಯದ ಸ್ಮಾರ್ಟ್ ನಗರ ‘NEOM’ನ ಭಾಗವಾದ ‘ದಿ ಲೈನ್’ ಪ್ರದೇಶದಲ್ಲಿ ಮರುಭೂಮಿಯ ನೆಲದಿಂದ ಸುಮಾರು 350 ಮೀಟರ್ (1,150 ಅಡಿ) ಎತ್ತರದಲ್ಲಿ ನಿರ್ಮಿಸಲಾಗುವ ಈ ಕ್ರೀಡಾಂಗಣ, 46,000 ಪ್ರೇಕ್ಷಕರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಲಿದೆ.

ಈ ಕ್ರೀಡಾಂಗಳವು 100% ಸೌರ ಮತ್ತು ಗಾಳಿ ಶಕ್ತಿಯಿಂದ ಕಾರ್ಯನಿರ್ವಹಿಸಲಿದ್ದು, ಪರಿಸರ ಸ್ನೇಹಿ ವಾಸ್ತುಶಿಲ್ಪದ ಮಾದರಿಯಾಗಿ ಮೂಡಲಿದೆ. 2032ರೊಳಗೆ ಪೂರ್ಣಗೊಳ್ಳಲಿದ್ದು, 2034ರ FIFA ವಿಶ್ವಕಪ್‌ ಪಂದ್ಯಗಳಿಗೆ ಆತಿಥ್ಯ ವಹಿಸಲು ಸಿದ್ಧವಾಗಲಿದೆ ಎಂದು Construction Review ವರದಿ ಮಾಡಿದೆ.

FIFA ಈಗಾಗಲೇ ಸೌದಿ ಅರೇಬಿಯಾದ ಏಕೈಕ ಬಿಡ್‌ಗೆ ಪ್ರಾಥಮಿಕ ಅನುಮೋದನೆ ನೀಡಿದ್ದು, ದೇಶವು 2034 ವಿಶ್ವಕಪ್ ಆತಿಥ್ಯಕ್ಕೆ ತೀವ್ರ ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯಡಿ 15 ಹೊಸ ಕ್ರೀಡಾಂಗಣಗಳ ನಿರ್ಮಾಣ ಆರಂಭವಾಗಲಿದ್ದು, ಅದರ ಕೇಂದ್ರಬಿಂದು ರಿಯಾದ್‌ನ ಕಿಂಗ್ ಸಲ್ಮಾನ್ ಅಂತರರಾಷ್ಟ್ರೀಯ ಕ್ರೀಡಾಂಗಣ (92,760 ಆಸನಗಳು) ಆಗಿದ್ದು, ಇದು 2029ಕ್ಕೆ ಪೂರ್ಣಗೊಳ್ಳಲಿದೆ ಎಂದು Arab News ತಿಳಿಸಿದೆ.

350 ಮೀಟರ್ ಎತ್ತರದಲ್ಲಿ ನಿರ್ಮಾಣವು ಎಂಜಿನಿಯರಿಂಗ್ ಸವಾಲುಗಳನ್ನು ಒಡ್ಡಿದ್ದರೂ, ಹೊಸ ತಾಂತ್ರಿಕ ಪರಿಹಾರಗಳು ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಇದನ್ನು ಜಯಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ. FIFA ಈ ಯೋಜನೆಯ ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.

ಯೋಜನೆ ಪ್ರಕಟಣೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆದಿದೆ. ಕೆಲವರು ತಾಂತ್ರಿಕ ಸಾಧ್ಯತೆಗೆ ಸಂದೇಹ ವ್ಯಕ್ತಪಡಿಸಿದರೆ, ಬಹುತೇಕರು ಜಾಗತಿಕ ಕ್ರೀಡಾ ಇತಿಹಾಸದ ಕ್ರಾಂತಿಕಾರಿ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ.

ಸೌದಿ ವಿಷನ್ 2030 ಯೋಜನೆಯಡಿ ಕ್ರೀಡೆ, ಪ್ರವಾಸೋದ್ಯಮ ಮತ್ತು ಆರ್ಥಿಕ ವೈವಿಧ್ಯಕ್ಕೆ ಹೊಸ ಆಯಾಮ ನೀಡುವ ಈ ಯೋಜನೆ, ಯಶಸ್ವಿಯಾದರೆ ಸೌದಿ ಅರೇಬಿಯಾದ ನವಯುಗದ ಕ್ರೀಡಾ ಗುರುತಾಗಿ ಮಾರ್ಪಟ್ಟೀತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.