ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್ಗಳ ಬೃಹತ್ ಗುರಿಯನ್ನು ಭಾರತ ಯಶಸ್ವಿಯಾಗಿ ಬೆನ್ನಟ್ಟಿ ಫೈನಲ್ಗೇರಿದೆ.
ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ 339 ರನ್ ಸವಾಲಿದ್ದರೂ ಮಹಾನ್ ಚೇಸಿಂಗ್ ಮಾಡಿದ ಭಾರತ ತಂಡ 5 ವಿಕೆಟ್ಗಳಿಂದ 7 ಬಾರಿಯ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಕೂಡ ಆಗಿದ್ದ ಆಸೀಸ್ ತಂಡವನ್ನು ಮಣಿಸಿ ಫೈನಲ್ಗೇರಿದೆ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ಗೇರಿರುವುದು ಇದು ಮೂರನೇ ಬಾರಿ. ಅದರಲ್ಲೂ ತವರಿನ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 339 ರನ್ಗಳನ್ನು ಚೇಸ್ ಮಾಡುವ ಕಠಿಣ ಸವಾಲು ಪಡೆದಿದ್ದ ಭಾರತ ತಂಡ 48.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 341 ರನ್ ಬಾರಿಸಿ ಆಸೀಸ್ ತಂಡವನ್ನು ಮಣಿಸಿ ಫೈನಲ್ ಸಾಧನೆ ಮಾಡಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
ಭಾರತದ ಬ್ಯಾಟಿಂಗ್ ವೇಳೆ 9ನೇ ಎಸೆತದಲ್ಲಿ ಕ್ರೀಸ್ಗೆ ಬಂದಿದ್ದ ಜೆಮಿಮಾ ರೋಡ್ರಿಗಸ್ ಗೆಲುವಿನವರೆಗೂ ಮೈದಾನದಲ್ಲಿದ್ದು ಭಾರತದ ಮಹಾನ್ ಗೆಲುವಿಗೆ ಸಾಕ್ಷಿಯಾದರು. 134 ಎಸೆತ ಎದುರಿಸಿದ 25 ವರ್ಷದ ಬ್ಯಾಟರ್ 14 ಬೌಂಡರಿಯೊಂದಿಗೆ 127 ರನ್ ಬಾರಿಸಿ ಅಜೇಯವಾಗುಳಿದರು.
59 ರನ್ ಗಳಿಸುವಾಗಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಜೆಮಿಮಾ ಆಡಿದ ಇನ್ನಿಂಗ್ಸ್ ಅತ್ಯಂತ ಸ್ಮರಣೀಯ ಎನಿಸುವಂಥ ಗೆಲುವು ತಂದುಕೊಟ್ಟಿತು. ಶೆಫಾಲಿ ವರ್ಮ ಕೇವಲ 10 ರನ್ ಬಾರಿಸಿ ಔಟಾದರೆ, ಅನುಭವಿ ಆಟಗಾರ್ತಿ ಸ್ಮೃತಿ ಮಂದನಾ 24 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಜೆಮಿಮಾಗೆ ಜೊತೆಯಾಗಿ ನಾಯಕಿ ಹರ್ಮಾನ್ಪ್ರೀತ್ ಕೌರ್, ಆಸೀಸ್ ಬೌಲಿಂಗ್ಅನ್ನು ಎಚ್ಚರಿಕೆಯಿಂದ ಎದುರಿಸಿದರು. ಆರಂಭದಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಜೋಡಿ, ಲಯ ಕಂಡುಕೊಂಡ ಬಳಿಕ ಆಸೀಸ್ ಬೌಲರ್ಗಳನ್ನು ಚೆಂಡಾಡಲು ಆರಂಭಿಸಿತು.
ಜೆಮಿಮಾ ಬಾರಿಸಿದ ಶತಕ ಮಹಿಳಾ ವಿಶ್ವಕಪ್ನ ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಭಾರತದ ಬ್ಯಾಟರ್ನ ಕೇವಲ 2ನೇ ಶತಕ ಎನಿಸಿದೆ



