ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಬದುಕು ಸೂತ್ರ ಹರಿದ ಗಾಳಿಪಟದಂತ್ತಾಗಿದೆ. ಒಂದೆಡೆ ಅವರ ವೃತ್ತಿಬದುಕು ಮುಗಿಯುವ ಹಂತಕ್ಕೆ ಬಂದಿದ್ದರೆ, ಇನ್ನೊಂದೆಡೆ ಅವರ ವೈಯಕ್ತಿಕ ಬದುಕು ಕೂಡ ಹಳಿ ತಪ್ಪಿ ವರ್ಷಗಳೇ ಕಳೆದಿವೆ. ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದ ಶಮಿಗೆ ಬಿಸಿಸಿಐ ಆಘಾತ ನೀಡಿದೆ. ಇದೀಗ ಅವರ ವೈಯಕ್ತಿಕ ಬದುಕಿನಲ್ಲಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಜೊತೆಗಿನ ವಿವಾದ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವಾಸ್ತವವಾಗಿ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಜೀವನಾಂಶ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ತನ್ನ ಜೀವನಾಂಶವನ್ನು ತಿಂಗಳಿಗೆ 10 ಲಕ್ಷಕ್ಕೆ ಹೆಚ್ಚಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ಕಳೆದ ಏಳು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2018 ರಲ್ಲಿ ಹಸಿನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಕಿರುಕುಳದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದರು. ಅಂದಿನಿಂದ ಅವರ ಪ್ರಕರಣ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಆರಂಭದಲ್ಲಿ, ವಿಚಾರಣಾ ನ್ಯಾಯಾಲಯವು ಶಮಿಗೆ, ಹಸಿನ್ ಜಹಾನ್ ಅವರಿಗೆ ತಿಂಗಳಿಗೆ 1.3 ಲಕ್ಷ ರೂಗಳನ್ನು ಮಧ್ಯಂತರ ನಿರ್ವಹಣಾ ಭತ್ಯೆಯಾಗಿ ಪಾವತಿಸಲು ಆದೇಶಿಸಿತ್ತು. ಆ ಬಳಿಕ ಜುಲೈ 2025 ರಲ್ಲಿ, ಕಲ್ಕತ್ತಾ ಹೈಕೋರ್ಟ್ ಈ ಮೊತ್ತವನ್ನು ತಿಂಗಳಿಗೆ 4 ಲಕ್ಷಕ್ಕೆ ಹೆಚ್ಚಿಸಿತು. ಅದರಲ್ಲಿ 1.5 ಲಕ್ಷ ಹಸಿನ್ ಜಹಾನ್ ಅವರಿಗೆ ಮತ್ತು 2.5 ಲಕ್ಷ ಅವರ ಮಗಳಿಗೆ ಎಂದು ಮೀಸಲಿರಿಸಿತ್ತು.
4 ಲಕ್ಷ ರೂ ಜೀವನ ನಿರ್ವಾಹಣೆಗೆ ಸಾಕಾಗುತ್ತಿಲ್ಲ ಎಂದು ಹಸಿನ್ ಜಹಾನ್ ಇದೀಗ ಕಲ್ಕತ್ತಾ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ, ತನ್ನ ಮತ್ತು ತನ್ನ ಮಗಳ ಮಧ್ಯಂತರ ಭತ್ಯೆಯನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಹಸಿನ್ ಜಹಾನ್ ಮೊದಲಿನಿಂದಲೂ 10 ಲಕ್ಷ ರೂ. ಭತ್ಯೆಯನ್ನು ಕೇಳುತ್ತಿದ್ದು, ಅದರಲ್ಲಿ ತನಗೆ 7 ಲಕ್ಷ ಮತ್ತು ತನ್ನ ಮಗಳಿಗೆ 3 ಲಕ್ಷ ಮೀಸಲಿರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಾಗ್ಯೂ, ಅವರ ಬೇಡಿಕೆಯನ್ನು ವಿಚಾರಣಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ತಿರಸ್ಕರಿಸಿದ್ದವು.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಹಸಿನ್ ಜಹಾನ್ ಅವರನ್ನೇ ಪ್ರಶ್ನಿಸಿರುವ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹಸಿನ್ ಜಹಾನ್ ಅವರ ವಕೀಲರ ಬಳಿ, ‘ಸಂತ್ರಸ್ತೆಗೆ ತಿಂಗಳಿಗೆ 4 ಲಕ್ಷ ಕೂಡ ಸಾಕಾಗುವುದಿಲ್ಲವೇ’ ಎಂದು ಕೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಶಮಿ ಮಡದಿಯ ಮೇಲ್ಮನವಿಯನ್ನು ಪುರಸ್ಕರಿಸುತ್ತಾ ಅಥವಾ ಮತ್ತೊಂದು ಮೊತ್ತವನ್ನು ನಿಗದಿಪಡಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.



