Flash News

ಇಸ್ಲಾಮಾಬಾದ್‌ ಕೋರ್ಟ್‌ ಕಾಂಪ್ಲೆಕ್ಸ್‌ನಲ್ಲಿ ಕಾರು ಬಾಂಬ್‌ ಸ್ಫೋಟ; 12 ಮಂದಿ ಸಾವು

ಇಸ್ಲಾಮಾಬಾದ್: ಇಲ್ಲಿನ ಕೋರ್ಟ್‌ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಇದು ಆತ್ಮಾಹುತಿ ದಾಳಿ ಎಂದು ವರದಿಯಾಗಿದೆ.

ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು, ಆತ್ಮಾಹುತಿ ಬಾಂಬ್ ದಾಳಿ ಮಧ್ಯಾಹ್ನ 12:39 ಕ್ಕೆ ನಡೆದಿದೆ. ಬಾಂಬರ್ ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ, 10 ರಿಂದ 15 ನಿಮಿಷಗಳ ಕಾಲ ಅಲ್ಲಿಯೇ ಕಾದ ನಂತರ ಹೊರಗೆ, ಪೊಲೀಸ್ ವಾಹನದ ಬಳಿ ಸಾಧನವನ್ನು ಸ್ಫೋಟಿಸಿದ್ದಾನೆಂದು ತಿಳಿಸಿದ್ದಾರೆ.

ಅದು ಕಾರ್ ಬಾಂಬ್ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಕಿಲೋಮೀಟರ್ ದೂರದಲ್ಲಿ ಕೇಳಿಬಂದ ಈ ಸ್ಫೋಟದ ಶಬ್ದವು ನ್ಯಾಯಾಲಯದ ಹೊರಗೆ ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿತು. ಜನದಟ್ಟಣೆಯಿಂದ ಕೂಡಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ.

ಯಾವುದೇ ಗುಂಪು ತಕ್ಷಣಕ್ಕೆ ಹೊಣೆ ಹೊತ್ತಿಲ್ಲ. ದೇಶಾದ್ಯಂತ ಉಗ್ರಗಾಮಿ ದಾಳಿಗಳು ಮತ್ತು ಪಾಕಿಸ್ತಾನಿ ತಾಲಿಬಾನ್ ಮತ್ತೆ ಸಕ್ರಿಯವಾಗುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿದೆ.