Flash News

ಉಡುಪಿಗೆ ಪ್ರಧಾನಿ ಮೋದಿ: ಉಡುಪಿ ಸುತ್ತಲಿನ ಶಾಲೆಗೆ ರಜೆ ಘೋಷಣೆ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಹಿನ್ನೆಲೆಯಲ್ಲಿ ನ.28ರಂದು ಜರಗಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ.28 ರಂದು ಉಡುಪಿ ನಗರದ ಸುತ್ತ ಮುತ್ತಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಯಲಿದ್ದು ಸುಮಾರು 30 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು ಈ ವೇಳೆ ಶಾಲಾ ಮಕ್ಕಳ ವಾಹನ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆ ಇರುವುದರಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರ ಠಾಣಾ ವ್ಯಾಪ್ತಿಯ, ಮಲ್ಪೆ ಠಾಣಾ ವ್ಯಾಪ್ತಿಯ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುಕ್ರವಾರ (ನ.28) ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.