Flash News

ಬೋಳಿಯಾರ್ ಅಪಘಾತ ಪ್ರಕರಣಕ್ಕೆ ತಿರುವು: ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಇಬ್ಬರು ಯುವಕರ ಕೊಲೆ ಆರೋಪ, ಪಿಕಪ್ ಚಾಲಕ ಸೆರೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರ್ ಸಮೀಪ ಇಬ್ಬರು ಯುವಕರು ಮೃತಪಟ್ಟ ರಸ್ತೆ ಅಪಘಾತ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ದ್ವಿಚಕ್ರ ವಾಹನಕ್ಕೆ ಉದ್ದೇಶಪೂರ್ವಕವಾಗಿ ಪಿಕಪ್ ವಾಹನದಿಂದ ಢಿಕ್ಕಿ ಹೊಡೆದು ಇಬ್ಬರನ್ನು ಕೊಲೆ ಮಾಡಿದ ಆರೋಪದಡಿ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು ಆತನ್ನು ಬಂಧಿಸಲಾಗಿದೆ.

ಮೃತ ಯುವಕರನ್ನು ಕಿನ್ಯದ ಮೊಹಮ್ಮದ್ ಜುನೈದ್ (23) ಮತ್ತು ಮೊಹಮ್ಮದ್ ಅಫ್ರಾಝ್ (23) ಎಂದು ಗುರುತಿಸಲಾಗಿದೆ. ಇಬ್ಬರೂ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೋಳಿಯಾರ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಪಿಕಪ್ ವಾಹನ ಢಿಕ್ಕಿ ಹೊಡೆದಿತ್ತು.

ಆರಂಭದಲ್ಲಿ ರಸ್ತೆ ಅಪಘಾತವೆಂದು ವರದಿಯಾಗಿದ್ದ ಈ ಘಟನೆ, ಬಳಿಕ ನಡೆದ ಪೊಲೀಸ್ ತನಿಖೆ ಹಾಗೂ ಮೃತ ಜುನೈದ್ ಅವರ ತಂದೆ ನೀಡಿದ ದೂರಿನ ಆಧಾರದಲ್ಲಿ ಉದ್ದೇಶಪೂರ್ವಕ ಕೃತ್ಯ ಎಂಬ ಆರೋಪಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.