ರಾವಲ್ಪಿಂಡಿ: ಜೈಲಿನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಪರಿಶೀಲಿಸದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಟ್ರೆಂಡ್ ಆಗಿವೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ “ಕೊಲೆಯಾಗಿದ್ದಾರೆ” ಎಂದು ಮೂಲಗಳಿಂದ ಮಾಹಿತಿ ಇದೆ ಎಂದು ಅಫ್ಘಾನ್ ಟೈಮ್ಸ್ ಎಂಬ ನ್ಯೂಸ್ ಹ್ಯಾಂಡಲ್ ಹೇಳಿಕೊಂಡ ನಂತರ ವದಂತಿಗಳು ಪ್ರಾರಂಭವಾಗಿವೆ.
ಆಧಾರರಹಿತ ಮತ್ತು ಪರಿಶೀಲಿಸದ ಈ ಹೇಳಿಕೆಗಳನ್ನು ಯಾವುದೇ ವಿಶ್ವಾಸಾರ್ಹ ಸಂಸ್ಥೆ ಅಥವಾ ಇಲಾಖೆ ಇದುವರೆಗೆ ದೃಢೀಕರಿಸಿಲ್ಲ. ಪಾಕಿಸ್ಥಾನದ ಮಾಜಿ ಪ್ರಧಾನಿಯನ್ನು ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಮತ್ತು ಇಮ್ರಾನ್ ಖಾನ್ ಅವರ ಕುಟುಂಬ ಸದಸ್ಯರಿಗೆ ಜೈಲಿನಲ್ಲಿ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ವರದಿಯಾದ ಸ್ವಲ್ಪ ಸಮಯದ ನಂತರ ವದಂತಿಗಳು ಹೊರಬಿದ್ದಿವೆ.ಅವರ ಮೂವರು ಸಹೋದರಿಯರಿಗೆ ಭೇಟಿಗೆ ಅವಕಾಶ ನೀಡಲಾಗಿಲ್ಲ ಎಂದು ವರದಿಗಳಾಗಿವೆ.
72 ವರ್ಷದ ಮಾಜಿ ಕ್ರಿಕೆಟಿಗ,ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ ಪ್ರಕರಣಗಳ ಜಾಲದಲ್ಲಿ ಶಿಕ್ಷೆಗೊಳಗಾದ ನಂತರ 2023 ರಿಂದ ಜೈಲಿನಲ್ಲಿದ್ದಾರೆ.



