Flash News

ಬೈಕ್‌ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 331 ಕೋಟಿ ಪತ್ತೆ: ED ಅಧಿಕಾರಿಗಳೇ ದಂಗು!

ಜೈಪುರ: ʻಲಕ್ಕಿ ಬಾಸ್ಕರ್‌ʼ ಸಿನಿಮಾ ನೋಡಿದ್ರೆ ಒಬ್ಬ ಸಾಧಾರಣ ಬ್ಯಾಂಕ್‌ ಉದ್ಯೋಗಿ 100 ಕೋಟಿ ರೂ. ಹಣ ಗಳಿಸೋದು ಅಚ್ಚರಿ ತರಿಸುತ್ತೆ. ಆದ್ರೆ ರಿಯಲ್‌ ಲೈಫಲ್ಲಿ ಆ ರೀತಿಯ ಘಟನೆಗಳು ತೀರ ಅಪರೂಪ. ಇದೀಗ ಅಂತಹದ್ದೇ ಘಟನೆಯೊಂದು ಉದಯಪುರದಲ್ಲಿ ನಡೆದಿದೆ. 2 ಕೋಣೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ರ‍್ಯಾಪಿಡೋ ಚಾಲಕನ ಬ್ಯಾಂಕ್‌ ಖಾತೆಯಲ್ಲಿ ನಡೆದ ವಹಿವಾಟು ಹಾಗೂ ಖರ್ಚು ವೆಚ್ಚ ನೋಡಿ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ.

ಏಕೆಂದ್ರೆ ರ‍್ಯಾಪಿಡೋ ಚಾಲಕನಿಗೆ ಸಂಪರ್ಕವೇ ಇಲ್ಲದ, ಆತ್ಮೀಯರೂ ಅಲ್ಲ, ಗೆಳೆಯ, ಕುಟುಂಬಸ್ಥರು ಅಲ್ಲದ ಜೋಡಿಗಳ ಮದುವೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕೇವಲ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಆಗಸ್ಟ್ 19, 2024 ರಿಂದ ಏಪ್ರಿಲ್ 16, 2025ರ ನಡುವೆ ವಹಿವಾಟು ನಡೆದಿದೆ. ಇದೀಗ ರ‍್ಯಾಪಿಡೋ ಚಾಲಕ (Rapido Driver) ಅರೆಸ್ಟ್ ಆಗಿದ್ದಾನೆ. ಇಷ್ಟೇ ಅಲ್ಲ ಈತನ ರೋಚಕ ಕತೆಗಳು ಹೊರಬಂದಿದೆ.

ಹೌದು. 1xBet ಆನ್‌ಲೈನ್ ಬೆಟ್ಟಿಂಗ್ ನೆಟ್‌ವರ್ಕ್‌ ಅಕ್ರಮ ಬೆಟ್ಟಿಂಗ್‌ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆ ನಡೆಸುತ್ತಿದ್ದ ವೇಳೆ ಇಡಿ ಅಧಿಕಾರಿಗಳ ತಂಡ ಬೈಕ್‌ ಟ್ಯಾಕ್ಸಿ ಚಾಲಕನ ಬ್ಯಾಂಕ್‌ ಖಾತೆಯಲ್ಲಿ ಬರೋಬ್ಬರಿ 331.36 ಕೋಟಿ ರೂ. ವಹಿವಾಟು ನಡೆದಿರುವುದನ್ನು ಪತ್ತೆಹಚ್ಚಿದೆ. ದಿನಕ್ಕೆ 500-600 ರೂ. ಸಂಪಾದಿಸಿಕೊಂಡು ಗುಡಿಸಲಲ್ಲಿ ವಾಸ ಮಾಡಿಕೊಂಡಿದ್ದ ಚಾಲಕ ಇಷ್ಟು ಕೋಟಿ ವಹಿವಾಟು ನಡೆಸಿದ್ದು ಕಂಡು ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ದಂಗಾಗಿದ್ದಾರೆ.

ಇತ್ತೀಚೆಗೆ ಗುಜರಾತ್‌ನ ಯುವ ರಾಜಕೀಯ ನಾಯಕ ಅದಿತ್ಯ ಝುಲಾ ಮದುವೆ ಉದಯಪುರದ ತಾಜ್ ಅರಾವಳಿ ರೆಸಾರ್ಟ್‌ನಲ್ಲಿ ನಡೆದಿತ್ತು. ಈ ಮದುವೆಗೆ ಇದೇ ರ‍್ಯಾಪಿಡೋ ಚಾಲಕ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಆದಿತ್ಯ ಝುಲಾಗೂ ಈ ಉಬರ್ ಚಾಲಕನಿಗೂ ಯಾವುದೇ ಸಂಪರ್ಕವಿಲ್ಲ. ಆದಿತ್ಯ ಝುಲಾಗೆ ಒಂದೇ ಒಂದು ಬಾರಿ ಫೋನ್ ಮಾಡಿಲ್ಲ. ಆದ್ರೆ ಮದ್ವೆಯ ಹಲವು ಬಿಲ್‌ಗಳನ್ನ ಪಾವಯಿ ಮಾಡಿದ್ದಾನೆ ಚಾಲಕ, ಇದರ ಖರ್ಚು ವೆಚ್ಚ ಒಟ್ಟು 1 ಕೋಟಿ ರೂ.ಗಳಷ್ಟಾಗಿದೆ ಎಂದು ಇ.ಡಿ ತನಿಖಾ ಮೂಲ ಹೇಳಿವೆ.

ರ‍್ಯಾಪಿಡೋ ಚಾಲಕ ಬೇರೆ ಖಾತೆಗಳಿಗೆ ಹಣ ವರ್ಗಾಯಿಸುವ ಹಾಗೂ ಈತನ ಖಾತೆಗೆ ಹಣ ಜಮೆ ಮಾಡುವ ಎಲ್ಲಾ ಖಾತೆಗಳು ಅಪರಿಚಿತ. ಒಂದಕ್ಕೊಂದು ಸಂಬಂಧವೇ ಇಲ್ಲ. ಇದೇ ಕಾರಣದಿಂದ ಇಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಎಲ್ಲಾ ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಿದ ಇಡಿ ಅಧಿಕಾರಿಗಳಿಗೆ ಒಂದು ಖಾತೆ ಬೆಟ್ಟಿಂಗ್ ಖಾತೆಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ತನಿಖೆ ಮುಂದುವರಿಸಿದ ಇಡಿ ಅಧಿಕಾರಿಗಳಿಗೆ ಈ ರ‍್ಯಾಪಿಡೋ ಚಾಲಕ ಬೆಟ್ಟಿಂಗ್‌ನಲ್ಲೂ ಸಕ್ರಿಯವಾಗಿದ್ದ ಅನ್ನೋದು ಗೊತ್ತಾಗಿದೆ. ಆದ್ರೆ ಈತನ ಫೋನ್ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಬೆಟ್ಟಿಂಗ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಸಿಕ್ಕಿಲ್ಲ ಅನ್ನೋದು ಅಧಿಕಾರಿಗಳ ಚಕಿತಕ್ಕೆ ಕಾರಣವಾಗಿದೆ.

ತನಿಖೆ ತೀವ್ರಗೊಳ್ಳುತ್ತಿದ್ದಂತ ಹಲವು ಅನಾಮಿಕ ಖಾತೆಗಳು, ಗೊತ್ತಿಲ್ಲದ ವ್ಯವಹಾರಗಳು ಬಯಲಾಗುತ್ತಿದೆ. ಹೀಗಾಗಿ ಈತನ ವ್ಯವಹಾರವೇನು? ಹಣದ ಮೂಲದ ಕುರಿತು ತೀವ್ರ ತನಿಖೆ ಮುಂದುವರಿದಿದೆ.