Flash News

ಅಮೆರಿಕದಲ್ಲಿ ‘ಆರ್‌ಎಸ್‌ಎಸ್ ಫ್ರೆಂಡ್ಸ್’ ಸಂಘಟನೆಯ ನೋಂದಣಿ: ವಿದೇಶಿ ಏಜೆಂಟ್ ಆಗಿ ಸಲ್ಲಿಕೆ

ವಾಷಿಂಗ್ಟನ್‌: ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್‌ಎಸ್‌) ನೋಂದಣಿಯಾಗಬೇಕು ಎಂದು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ ಆಗ್ರಹಿಸುತ್ತಿರುವ ನಡುವೆಯೇ, ಆರ್‌ಎಸ್‌ಎಸ್ ಅಭಿಮಾನಿಗಳು ಹಾಗೂ ಹಿತೈಷಿಗಳ ಪಡೆ ‘ಆರ್‌ಎಸ್‌ಎಸ್ ಫ್ರೆಂಡ್ಸ್’ ಎಂಬ ಹೆಸರಿನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ಅಮೆರಿಕದಲ್ಲಿ ಸಂಘದ ವಿಚಾರಗಳನ್ನು ವ್ಯಾಪಕವಾಗಿ ಪಸರಿಸುವುದು ಮತ್ತು ಜಾಗೃತಿ ಮೂಡಿಸುವುದು ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ.

ಅಮೆರಿಕದ ವಿದೇಶಿ ಏಜೆಂಟ್‌ಗಳ ನೋಂದಣಿ ಕಾಯ್ದೆಯಡಿ ‘ಆರ್‌ಎಸ್‌ಎಸ್ ಫ್ರೆಂಡ್ಸ್’ ಸಂಘಟನೆಯು ಆ.27ರಂದು ತನ್ನ ಹೆಸರನ್ನು ನೋಂದಾಯಿಸಿಕೊಂಡಿದೆ. ಜಾರ್ಜಿಯಾ ವಿಳಾಸವನ್ನು ನೀಡಿರುವ ಸಂಸ್ಥೆಯು, ದೆಹಲಿಯ ಆರ್‌ಎಸ್‌ಎಸ್‌ ಕಚೇರಿ ಕೇಶವಕುಂಜವನ್ನು ತನ್ನ ‘ಫಾರಿನ್ ಪ್ರಿನ್ಸಿಪಾಲ್’ (ವಿದೇಶಿ ಸಂಸ್ಥೆ) ಎಂದು ನಮೂದಿಸಿದೆ. ತನ್ನ ನಿರ್ದೇಶಕರ ಮಂಡಳಿಯಲ್ಲಿ ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ದೇವಾನಂದ ಗದ್ದಮ್ ಅವರನ್ನು ಹೆಸರಿಸಿದೆ.

ಈ ನೋಂದಣಿ ಪ್ರಕ್ರಿಯೆಯು, ಆ.29ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್’ ಕಾರ್ಯಕ್ರಮಕ್ಕಿಂತ 2 ದಿನಗಳ ಮುಂಚಿತವಾಗಿ ನಡೆದಿತ್ತು ಎಂಬುದು ವಿಶೇಷ.

ನೋಂದಣಿ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯು, ‘ಆರ್‌ಎಸ್‌ಎಸ್‌ ಜತೆಗೆ ಯಾವುದೇ ಲಿಖಿತ ದೃಢೀಕೃತ ಉದ್ಯೋಗ, ಸಲಹಾ, ಸಾರ್ವಜನಿಕ ಸಂಪರ್ಕ ಅಥವಾ ಏಜೆನ್ಸಿ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಲಿಖಿತ ಒಪ್ಪಂದವಿಲ್ಲ ಎಂದಮಾತ್ರಕ್ಕೆ ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಪರ್ಕ, ಸಮನ್ವಯ ಅಥವಾ ಆಡಳಿತಾತ್ಮಕ ಸಹಕಾರವೇ ಇಲ್ಲ ಎಂದು ಅರ್ಥೈಸಬಾರದು’ ಎಂದು ಸ್ಪಷ್ಟಪಡಿಸಿದೆ. ತನ್ನ ಕಾರ್ಯಚಟುವಟಿಕೆಗಳ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸುವುದಾಗಿ ತಿಳಿಸಿದೆ.