ಕೊಟ್ಟಾಯಂ: ಕೇರಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶನಿವಾರ (ಡಿ.13) ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸಿದ್ದು, ಪಂಚಾಯತ್ ಚುನಾವಣೆಯಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿರುವುದಾಗಿ ತಿಳಿಸಿದೆ.
ಕೇರಳದಾದ್ಯಂತ ಬಿಗಿ ಬಂದೋಬಸ್ತ್ ನಲ್ಲಿ 244 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ರಾಜ್ಯ ಚುನಾವಣ ಆಯೋಗದ ವೆಬ್ ಸೈಟ್ ಮಾಹಿತಿಯಂತೆ, ಎಲ್ ಡಿಎಫ್ 353 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಯುಡಿಎಫ್ 309 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ ಡಿಎ 30 ಗ್ರಾಮ ಪಂಚಾಯತ್ ಸ್ಥಾನ ಹಾಗೂ ಪಕ್ಷೇತರರು 13 ಗ್ರಾಪಂ ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಡಿ.9 ಮತ್ತು 11ರಂದು ಎರಡು ಹಂತಗಳಲ್ಲಿ ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿತ್ತು. ಒಟ್ಟು 941 ಗ್ರಾಮ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಒಟ್ಟು 14 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಯುಡಿಎಫ್ 7ರಲ್ಲಿ , ಎಲ್ ಡಿಎಫ್ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಈವರೆಗೆ ಜಿಲ್ಲಾ ಪಂಚಾಯತ್ ಮತಎಣಿಕೆಯಲ್ಲಿ ಎನ್ ಡಿಎ ಯಾವುದೇ ಸ್ಥಾನ ಪಡೆದಿಲ್ಲ.
ಮತ್ತೊಂದೆಡೆ ಮುನ್ಸಿಪಾಲ್ಟಿಯ 87 ಸ್ಥಾನಗಳಲ್ಲಿ ಯುಡಿಎಫ್ 48 ಸ್ಥಾನಗಳಲ್ಲಿ ಹಾಗೂ ಎಲ್ ಡಿಎಫ್ 30 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಎನ್ ಡಿಎ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ನಗರಸಭೆಯ ಚುನಾವಣೆಯಲ್ಲಿ ಒಟ್ಟು 6 ಸ್ಥಾನಗಳಲ್ಲಿ ಯುಡಿಎಫ್ ನಾಲ್ಕರಲ್ಲಿ, ಎಲ್ ಡಿಎಫ್ 1ರಲ್ಲಿ ಹಾಗೂ ಎನ್ ಡಿಎ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ನಗರಸಭೆ ಚುನಾವಣೆಯಲ್ಲಿ ಯುಡಿಎಫ್ ಗಮನಾರ್ಹ ಸಾಧನೆ ಮಾಡಿದ್ದು ಫಲಿತಾಂಶದಲ್ಲಿ ಕಂಡು ಬಂದಿದೆ.



