Flash News

‘ಸಂಘ ಪರಿವಾರದ ಮುಸ್ಲಿಮ್ ವಿರೋಧಿ ರಾಜಕೀಯವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ’: ಪಿಣರಾಯಿ ವಿಜಯನ್ ಕಿಡಿ

ಬೆಂಗಳೂರು: ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಅವರು ಎಲ್ಲಿಗೆ ಹೋಗಬೇಕು. ಈ ಚಳಿಯಲ್ಲಿ ಮಕ್ಕಳ, ಮಹಿಳೆಯರನ್ನು ಬೀದಿಗೆ ಹಾಕಿದ್ದಾರೆ ಎಂದು ಅವರು ಸೋಶಿಯಲ್​​ ಮೀಡಿಯಾದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ,”ಬುಲ್ಡೋಜರ್ ರಾಜ್” ಕ್ರಮವನ್ನು ಕರ್ನಾಟಕ ಕಾಂಗ್ರೆಸ್​​ ಸರ್ಕಾರ ಅನುಸರಿಸುತ್ತಿದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ.

ದುಃಖಕರ ವಿಚಾರವೆಂದರೆ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲ ಬಲಿಪಶುಗಳಾಗುತ್ತವೆ. ಈ ಮೋಸದ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು” ಎಂದು ಹೇಳಿದ್ದಾರೆ.