Flash News

ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರತಾಪ್ ಸಿಂಹ? ಇದುವೇ ಇವರ ವಿಧಾನಸಭಾ ಕ್ಷೇತ್ರ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಪ್ರತಾಪ್ ಸಿಂಹ ಇದೀಗ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದಾರೆ. ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ತಮ್ಮ ಮುಂದಿನ ರಾಜಕೀಯ ಜೀವನದ ಕರ್ತವ್ಯ ಪಥ ಯಾವುದು ಎಂಬುದರ ಮಾಹಿತಿಯನ್ನು ನೀಡಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಸ್ಥಳೀಯ ಪತ್ರಿಕೆಗೆ ಸಂದರ್ಶನ ನೀಡಿದ್ದ ಪ್ರತಾಪ್ ಸಿಂಹ, ರಾಜ್ಯ ರಾಜಕಾರಣಕ್ಕೆ ಬರುತ್ತಿರುವ ಮಾಹಿತಿಯನ್ನು ನೀಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರದಿಂದಲೇ ರಾಜ್ಯ ರಾಜಕಾರಣ ಆರಂಭಿಸುತ್ತೇನೆ ಎಂದಿದ್ದರು. ಆದ್ರೆ ಯಾವ ವಿಧಾನಸಭಾ ಕ್ಷೇತ್ರ ಎಂಬುದರ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ಕುತೂಹಲಕ್ಕೆ ಪ್ರತಾಪ್ ಸಿಂಹ ತೆರೆ ಎಳೆದಿದ್ದಾರೆ.

ಪ್ರತಾಪ್ ಸಿಂಹ ಸ್ನೇಹ ಬಳಗದ ಹೆಸರಿನಲ್ಲಿ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗಿದೆ. ಈ ಕ್ಯಾಲೆಂಡರ್‌ನಲ್ಲಿ ಪ್ರಧಾನಿ ಮೋದಿ ಫೋಟೊ ಜೊತೆಗೆ ಪ್ರತಾಪ್ ಸಿಂಹ ಅವರ ಫೋಟೋ ಮತ್ತು ಬಿಜೆಪಿ ಚಿಹ್ನೆಯನ್ನು ಬಳಸಲಾಗಿದೆ. ಕ್ಯಾಲೆಂಡರ್ ನ ಪ್ರತಿ ಹಾಳೆಯಲ್ಲಿ ಈ ಹಿಂದೆ ಮೈಸೂರು-ಕೊಡಗು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಫೋಟೋ ಬಳಕೆ ಮಾಡಲಾಗಿದೆ.

ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಾಪ್ ಸಿಂಹ ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಮುಂದಿನ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಲು ಪ್ರತಾಪ್ ಸಿಂಹ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಮರಾಜ ಕ್ಷೇತ್ರದ ಬಿಜೆಪಿ ನಗರಪಾಲಿಕೆ ಮಾಜಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದಾರೆ. ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿದ್ದು, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು.