ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕಿಡಿಕಾರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಹಾಗೂ ಅವಮಾನಕಾರಿ ಕಮೆಂಟ್ ಪ್ರಕರಣ ಸಂಬಂಧ ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರ್ಸನಲ್ ಮತ್ತು ರಾಜಕೀಯ ವಿಚಾರವಾಗಿ ಎರಡು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದೇನೆ. ಪರ್ಸನಲ್ ಖಾತೆಗೆ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ವ್ಯಾಯಾಮ ಮಾಡಿದ್ರೂ ತಪ್ಪು, ಬರ್ತ್ಡೇ ಆಚರಿಸಿದ್ರೆ ತಪ್ಪಾ?. ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ. ಅಶ್ಲೀಲ ಕಮೆಂಟ್ ಸಂಬಂಧ ಕಾರ್ಯಕರ್ತರು ದೂರು ನೀಡಿದ್ದಾರೆ. ಈಗಾಗಲೇ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾನು ಧೈರ್ಯವಾಗಿ ಜೀವನ ಮಾಡ್ತೇನೆ. ನನಗೆ ಯಾರ ಭಯವಿಲ್ಲ. ನಾನು ಯಾವುದೇ ದೂರನ್ನು ಕೊಡುವುದಿಲ್ಲ. ನಾನು ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂದು ಹೇಳಿದರು.
ನಾನು ನನ್ನ ಪರ್ಸನಲ್ ಖಾತೆಯನ್ನು ಮೊದಲಿಂದಲೂ ಪಬ್ಲಿಕ್ ಆಗಿ ಇಟ್ಕೊಂಡಿದ್ದೇನೆ. ನಾನೇನು ಅದಕ್ಕೆ ಪ್ರೈವೆಸಿ ಸೆಟ್ಟಿಂಗ್ ಮಾಡಿಲ್ಲ, ಪ್ರೈವೇಟ್ ಆಗಿ ಇರಬೇಕು ಅಂತಾನೂ ಪ್ರಯತ್ನ ಮಾಡಿಲ್ಲ. ರಾಜಕೀಯ ಪ್ರವೇಶ ಮಾಡೋದಕ್ಕಿಂತ ಮುಂಚೆ ನಾನು ಹೇಗಿದ್ದೆ, ಅದೇ ರೀತಿ ಇರಬೇಕು ಅಂತ ಪ್ರಯತ್ನ ಮಾಡ್ತಿದ್ದೇನೆ. ಯಾಕಂದ್ರೆ, ನನ್ನ ನಿಲುವು ತುಂಬಾ ಕ್ಲಿಯರ್ ಆಗಿದೆ. ಎಲೆಕ್ಷನ್ಗಿಂತ ಮುಂಚೆ ಎಲೆಕ್ಷನ್ ಆದ ಮೇಲೂ ನಾನು ಪಾರದರ್ಶಕವಾಗಿ ನನ್ನ ಜೀವನ ನಡೆಸಬೇಕು ಅಂತ. ಯಾಕಂದ್ರೆ, ನಾವು ರಾಜಕಾರಣಿಗಳಾಗಿ ಯಾವುದೇ ರೀತಿ ಮುಚ್ಚುಮರೆ ಮಾಡಬಾರದು ಎಂದು ತಿಳಿಸಿದರು.
ಪೊಲಿಟಿಕಲ್ ಖಾತೆಯಲ್ಲಿ ಯಾವುದೇ ಅಶ್ಲೀಲ ಕಮೆಂಟ್ಸ್ ಇಲ್ಲ. ಆದರೆ ವೈಯಕ್ತಿಕ ಖಾತೆಯಲ್ಲಿ ನಾನು ಬೇರೆ ಡ್ರೆಸ್ ಹಾಕಿದ ತಕ್ಷಣನೇ ಇನ್ಸ್ಟಾಗ್ರಾಮ್ನಲ್ಲಿ ಎಂಎಲ್ಎ ಗುಂಡಿ ಮುಚ್ಚಿಲ್ಲ, ಅದು ಇದು ಅಂತ ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾರೆ. ನಾವು ಇರೋದೆ ಹನ್ನೊಂದು ಜನ ಮಹಿಳಾ ಶಾಸಕಿಯರು. ಅದರಲ್ಲಿ ನಾನು ಧೈರ್ಯ ಮಾಡಿ ಸುಮಾರು ವರ್ಷಗಳಿಂದ ನನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆ ಎರಡನ್ನೂ ಪಬ್ಲಿಕ್ ಆಗಿ ನಡೆಸಿಕೊಂಡು ಬರುತ್ತಿದ್ದೇನೆ ಎಂದರು.
ಸಾರ್ವಜನಿಕ ಜೀವನದಲ್ಲಿ ಇದ್ದಾಗಲೇ ನಮಗೆ ಜಿಗುಪ್ಸೆ, ಹಿಂಸೆ ಅನ್ಸುತ್ತೆ. ನಾವು ಏನು ತಪ್ಪು ಮಾಡ್ತಾ ಇದ್ದೀವಿ ಅಂತ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುತ್ತೀವಿ. ಅದರಲ್ಲಿ ನನಗನಿಸುತ್ತೆ ಎಲ್ಲಾ ರೀತಿಯಲ್ಲೂ ನಾನು ರಾಜಕಾರಣಿಗಳ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ. ವಿಶೇಷವಾಗಿ ಮಹಿಳೆಯರ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ ಎಂದರು.



