ಪುತ್ತೂರು: ಉಪ್ಪಳಿಗೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿದ್ವೇಷ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂಘಟಕ ಚರಣ್ ಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಉಪ್ಪಳಿಗೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ದ್ವೇಷದ ಮತ್ತು ಮಹಿಳೆಯರ ವಿರುದ್ಧ ಅವಮಾನಕಾರಿಯಾದ ಭಾಷಣ ಮಾಡಿದ್ದರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಡಾ|ಪ್ರಭಾಕರ ಭಟ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಡಾ|ಪ್ರಭಾಕರ ಭಟ್ ಅವರಿಗೆ ನ್ಯಾಯಾಲಯ ಈಗಾಗಲೇ ಮಧ್ಯಂತರ ಜಾಮೀನು ನೀಡಿದ್ದು, ಅದರ ವಿಸ್ತರಣೆ ಕೋರಿದ ಅರ್ಜಿಯನ್ನೂ ಪುರಸ್ಕರಿಸಿ ಅರ್ಜಿಯ ಅಂತಿಮ ವಿಲೇವಾರಿ ತನಕ ವಿಸ್ತರಣೆ ನೀಡಿತ್ತು.



