ಸುಹೈಲ್ ಕಂದಕ್ ಪೊಲೀಸರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ದೊಡ್ಡ ಯಶಸ್ಸು
ಮಂಗಳೂರು: ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಣ ತೊಟ್ಟಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಇದೇ ಮೊದಲ ಬಾರಿಗೆ ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿರುವ ಕೇರಳದ ವಿದ್ಯಾರ್ಥಿಗಳನ್ನು ದಿಢೀರ್ ಆಗಿ ಡ್ರಗ್ಸ್ ತಪಾಸಣೆಗೆ ಒಳಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಒಂದೇ ದಿನ 200 ಮಂದಿಯನ್ನು ತಪಾಸಣೆ ನಡೆಸಿದ್ದು ಎಲ್ಲರೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮಂಗಳೂರು ಪೊಲೀಸರ ಸಹಯೋಗದಲ್ಲಿ ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಡ್ರಗ್ಸ್ ಪೆಡ್ಲರ್ಗಳು, ಅವರಿಗೆ ಪೂರೈಕೆ ಮಾಡುತ್ತಿರುವ ಕೊಂಡಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಕಮಿಷನರ್ ಅದರಲ್ಲಿ ದೊಡ್ಡ ಯಶಸ್ಸನ್ನೂ ಸಾಧಿಸಿದ್ದಾರೆ.
ಆದರೂ ಕೇರಳ ಮೂಲದ ದೇರಳಕಟ್ಟೆಯ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಆಗುತ್ತದೆ ಎನ್ನುವ ಆರೋಪಗಳಿದ್ದವು. ಈ ಹಿನ್ನೆಲೆಯಲ್ಲಿ ಸಿಇಎನ್ ಮತ್ತು ಉಳ್ಳಾಲ, ಕೊಣಾಜೆ ಠಾಣೆಯ ಪೊಲೀಸರನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ದಿಢೀರ್ ತಪಾಸಣೆ ಕೈಗೊಳ್ಳಲಾಗಿದೆ. ಕಾಲೇಜು ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾಲೇಜು ಬಸ್ಗಳನ್ನೇ ತಪಾಸಣಾ ಕೇಂದ್ರಕ್ಕೆ ಒಯ್ದು ಪರೀಕ್ಷೆ ನಡೆಸಲಾಗಿದೆ.
ಕೊಣಾಜೆ, ಉಳ್ಳಾಲ ಠಾಣೆ ವ್ಯಾಪ್ತಿಯ ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್. ಹೆಗ್ಡೆ), ಕಣಚೂರು ಸಂಸ್ಥೆ, ಪಿ.ಎ. ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಖಾಸಗಿ ಬಸ್‌ಗಳು ಮತ್ತು ಕಾಲೇಜು ಬಸ್ ಗಳಲ್ಲಿ ಹೋಗುವ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲಾಯಿತು.
ಇದುವರೆಗೆ ಒಟ್ಟು 103 ಪರೀಕ್ಷೆಗಳು ಪೂರ್ಣಗೊಂಡಿವೆ, ಅವುಗಳಲ್ಲಿ 101 ನಕಾರಾತ್ಮಕವಾಗಿವೆ. ಪ್ರಸ್ತುತ ಹತ್ತು ಪರೀಕ್ಷೆಗಳು ಪ್ರಗತಿಯಲ್ಲಿವೆ, ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾರ್ಯ ವಿಧಾನದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇತರ ಎಲ್ಲಾ ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದಿತ್ತು . ಒಟ್ಟಾರೆಯಾಗಿ ಪೊಲೀಸ್, ನಾಗರಿಕ ಆಡಳಿತ, ಮಾಧ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ನಿರಂತರ ಪ್ರಯತ್ನಗಳಿಂದ ಮಾದಕ ವಸ್ತು ವಿರುದ್ಧದ ಅಭಿಯಾನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.



