Flash News

ಅಜಿತ್ ಪವಾರ್ ಸಾವು: ಇತರ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ, ‘ಸುಪ್ರೀಂ’ ಮೇಲ್ವಿಚಾರಣೆಯಲ್ಲಿ ವಿಮಾನ ಪತನ ತನಿಖೆಗೆ ಮಮತಾ ಆಗ್ರಹ

ಕೋಲ್ಕತ್ತಾ: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ.

ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಮೂಲಕ ಸತ್ಯ ಹೊರಬರುವುದಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆ ಮಾತ್ರ ವಿಶ್ವಾಸಾರ್ಹವಾಗಿರುತ್ತದೆ ಎಂದು ಹೇಳಿದ್ದಾರೆ.

‘ನಾವು ಸುಪ್ರೀಂ ಕೋರ್ಟ್ ಅನ್ನು ಮಾತ್ರ ನಂಬುತ್ತೇವೆ. ಇತರ ಎಲ್ಲ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ’ ಎಂದು ಅವರು ಸಿಂಗೂರ್‌ಗೆ ತೆರಳುವ ಮೊದಲು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ವಿಮಾನ ಅಪಘಾತಕ್ಕೀಡಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಮತ್ತು ಇತರ ನಾಲ್ವರು ಸಾವಿಗೀಡಾಗಿದ್ದಾರೆ.

ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ಲಿಯರ್‌ಜೆಟ್ 46, ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂದು ಬೆಳಗ್ಗೆ ಪತನಗೊಂಡಿದೆ. ಸಿಬ್ಬಂದಿ ಸೇರಿದಂತೆ ಐವರು ವಿಮಾನದಲ್ಲಿದ್ದರು ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

‘ಇಂದು ಬೆಳಿಗ್ಗೆ ಅಜಿತ್ ಪವಾರ್ ಅವರ ಸಾವಿನ ಸುದ್ದಿ ನೋಡಿ ನನಗೆ ನಿಜಕ್ಕೂ ಆಘಾತವಾಯಿತು. ಈ ದೇಶದಲ್ಲಿ ರಾಜಕೀಯ ನಾಯಕರಿಗೂ ಸಹ ಯಾವುದೇ ಸುರಕ್ಷತೆ ಅಥವಾ ಭದ್ರತೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಇಂದು ಆಡಳಿತ ವ್ಯವಸ್ಥೆಯ ಭಾಗವಾಗಿರುವವರು ಸಹ ಸುರಕ್ಷಿತವಾಗಿರುವಂತೆ ಕಾಣುತ್ತಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.