Flash News

 ಮಂಗಳೂರು | ರೈಲ್ವೇ ಟ್ರಾಕ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ವಿಡಿಯೋ ತೆಗೆದು ಜಾಲತಾಣದಲ್ಲಿ ವೈರಲ್, ತಂದೆ- ಮಗ ಬಂಧನ

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಬಳಿ ಕುಳಿತುಕೊಂಡಿದ್ದ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯ ವಿಡಿಯೋ ಮಾಡಿ, ಹುಡುಗನಿಗೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದ್ದು ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಂಡೇಶ್ವರ ಠಾಣೆ ವ್ಯಾಪ್ತಿಯ ಅತ್ತಾವರದ ನಿವಾಸಿಗಳಾದ ಸ್ಟೀವನ್ ಮೊಂತೇರೊ ಮತ್ತು ಆತನ ಮಗ ಅವಿಲ್ ಬಂಧಿತ ಆರೋಪಿಗಳು. ಫೆ.23ರಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ರೈಲ್ವೇ ಟ್ರಾಕ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸ್ಟೀವನ್ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದು ಅದನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ವಿಡಿಯೋ ಮಾಡುತ್ತ ಹುಡುಗಿಯನ್ನು ನೀನ್ಯಾರು, ಎಲ್ಲಿ ಓಡುತ್ತೀಯಾ, ಇಲ್ಲೇನು ಮಾಡ್ತಿದೀರಿ ಎಂದು ಜೋರು ಮಾಡಿದ್ದಾರೆ. ಅಲ್ಲದೆ, ಹುಡುಗನನ್ನು ಇಲ್ಲಿ ಕುಳಿತು ಏನು ಮಾಡ್ತಿದೀಯಾ, ನಾನು ವಿಡಿಯೋ ಮಾಡಿದ್ದೇನೆ, ಫೇಸ್ಬುಕ್ ಹಾಕುತ್ತೇನೆ ಎನ್ನುತ್ತ ಆತನಿಗೆ ಎರಡೇಟು ಕೊಟ್ಟು ಬೆದರಿಕೆ ಹಾಕಿದ್ದಾನೆ. ‌ಅಲ್ಲದೆ, ತಂದೆ-ಮಗ ಇಬ್ಬರು ಸೇರಿ ಹುಡುಗನನ್ನು ಎಳಕೊಂಡು ಹೋಗಿದ್ದಾರೆ. ‌ವಿಡಿಯೋವನ್ನು ಸ್ಟೀವನ್ ತನ್ನ ಫೇಸ್ಬುಕ್ ನಲ್ಲಿ ಷೇರ್ ಮಾಡಿ ತನ್ನದೂ ಸೆಲ್ಫಿ ತೋರಿಸಿದ್ದಾನೆ‌. ವಿಡಿಯೋ ವೈರಲ್ ಆಗುತ್ತಲೇ ಹುಡುಗನ ತಂದೆ ಪೊಲೀಸ್ ದೂರು ನೀಡಿದ್ದಾರೆ. ಹುಡುಗ ಪರಿಶಿಷ್ಟ ಜಾತಿಗೆ ಸೇರಿದ್ದು ಮೋರಲ್ ಪೊಲೀಸಿಂಗ್ ಮತ್ತು ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸ್ಟೀವನ್ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.