Flash News

ಇರಾನ್ ದಾಳಿ ಬಳಿಕ ಗಲ್ಫ್‌ ನಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ಸ್ಫೋಟ, ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ಮೃತ್ಯು

ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದ ಯುಎಇ

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಫೋಟಗಳ ಸ್ವರೂಪ, ಹಾನಿ ಮತ್ತು ಕಾರಣಗಳ ಕುರಿತು ತಕ್ಷಣದ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಇದೇ ವೇಳೆ ಗಲ್ಫ್ ಪ್ರದೇಶದಲ್ಲಿನ ಪ್ರಮುಖ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ದೃಢಪಡಿಸಿದೆ. ಖತರ್ ನಲ್ಲಿರುವ ಅಲ್-ಉದೈದ್ ವಾಯುನೆಲೆ, ಕುವೈತ್ ನ ಅಲ್-ಸಲೇಂ ವಾಯುನೆಲೆ, ಯುಎಇಯ ಅಲ್-ದಫ್ರಾ ವಾಯುನೆಲೆ ಹಾಗೂ ಬಹ್ರೇನ್‌ ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ನೆಲೆಯನ್ನು ಇರಾನ್ ಕ್ಷಿಪಣಿ ದಾಳಿಗೆ ಗುರಿಯಾಗಿಸಲಾಗಿದೆ ಎಂದು ಇರಾನಿನ FARS ಸುದ್ದಿ ಸಂಸ್ಥೆ ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಮೂಲಗಳು ಹೇಳಿವೆ. ಬಹ್ರೇನ್ ನ ರಾಜಧಾನಿ ಮನಾಮಾದಲ್ಲಿರುವ ಯುಎಸ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಜೋರಾದ ಸ್ಫೋಟ ಕೇಳಿಬಂದಿರುವುದಾಗಿ ಎಎಫ್ಪಿ ಮತ್ತೊಂದು ವರದಿಯಲ್ಲಿ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಖತರ್ ನ ರಕ್ಷಣಾ ಸಚಿವಾಲಯ, ದೇಶದ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಲವಾರು ದಾಳಿಗಳನ್ನು ಯಶಸ್ವಿಯಾಗಿ ಇಂಟರ್ಸೆಪ್ಟರ್ ಮೂಲಕ ವಿಫಲಗೊಳಿಸಲಾಗಿದೆ ಎಂದು ತಿಳಿಸಿದೆ. “ಇಂಟರ್ಸೆಪ್ಟರ್ ಮೂಲಕ ಕ್ಷಿಪಣಿಗಳು ಖತರ್ ತಲುಪುವ ಮೊದಲು ತಡೆಹಿಡಿಯಲಾಗಿದೆ,” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

“ಈ ದಾಳಿಯು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಯುಎಇ ಹೇಳಿದೆ.

ಅಮೆರಿಕ, ಇಸ್ರೇಲ್ ಜಂಟಿಯಾಗಿ ಆಪರೇಷನ್ ಶೀಲ್ಡ್ ಆಫ್ ಜುದಾ ಹೆಸರಿನಲ್ಲಿ ವೈಮಾನಿಕ ದಾಳಿ ಮಾಡಿದ ಬೆನ್ನಲ್ಲೇ ಇರಾನ್ ಪ್ರತಿಯಾಗಿ ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾ ನೆಲೆ ಮತ್ತು ಯುಎಇ ನಲ್ಲಿರುವ ಅಲ್-ದಫ್ರಾ ವಾಯುನೆಲೆಯ ಮೇಲೆ ದಾಳಿ ಮಾಡಿದೆ. ಸದ್ಯ ಮಧ್ಯಪ್ರಾಚ್ಯವು ಉದ್ವಿಗ್ನವಾಗಿದ್ದು ದೊಡ್ಡ ಯುದ್ಧಕ್ಕೆ ಸಾಕ್ಷಿಯಾಗಿದೆ.