Flash News

ದುಬೈ: ಇರಾನ್ ದಾಳಿಯ ವೀಡಿಯೋ ಹಂಚಿಕೊಂಡರೆ 50 ಲಕ್ಷ ರೂ. ದಂಡ

ಇತ್ತೀಚೆಗೆ ದುಬೈ ಮೇಲೆ ನಡೆದ ಇರಾನ್ ಡ್ರೋನ್ ದಾಳಿಗಳು ಆತಂಕ ಮೂಡಿಸಿವೆಯಾದರೂ, ಈ ಘಟನೆಯ ನೈಜ ಚಿತ್ರಣ ಹೊರಜಗತ್ತಿಗೆ ಹೆಚ್ಚು ರವಾನೆಯಾಗುತ್ತಿಲ್ಲ. ದಾಳಿಯ ದೃಶ್ಯಗಳು, ವಿಡಿಯೊಗಳು ಅಥವಾ ‘ರೀಲ್ಸ್’ಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಬರೋಬ್ಬರಿ ಸುಮಾರು 50 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದುಬೈ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

​ತೈಲ ಆಧಾರಿತ ಆರ್ಥಿಕತೆಯಿಂದ ಹೊರಬಂದು ಪ್ರವಾಸೋದ್ಯಮ, ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳತ್ತ ದುಬೈ ಮುಖ ಮಾಡಿದೆ. ಭವಿಷ್ಯದ ಆರ್ಥಿಕ ಭದ್ರತೆಗಾಗಿ ದುಬೈ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ತಾನೊಂದು ಅತ್ಯಂತ ‘ಸುರಕ್ಷಿತ ತಾಣ’ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ಬುರ್ಜ್ ಅಲ್ ಅರಬ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆದ ಡ್ರೋನ್ ದಾಳಿಯ ಭಯಾನಕ ವಿಡಿಯೊಗಳು ವೈರಲ್ ಆದರೆ, ಪ್ರವಾಸಿಗರು ಹಾಗೂ ಜಾಗತಿಕ ಹೂಡಿಕೆದಾರರು ಹಿಂದೇಟು ಹಾಕಬಹುದು ಎಂಬುದು ಸರ್ಕಾರದ ಆತಂಕವಾಗಿದೆ.

​ಈ ಕಾರಣಕ್ಕಾಗಿಯೇ, ಯುಎಇಯ ಕಠಿಣ ಸೈಬರ್ ಭದ್ರತಾ ಕಾನೂನುಗಳ ಅಡಿಯಲ್ಲಿ ಇಂತಹ ವಿಡಿಯೊಗಳ ಪ್ರಸಾರಕ್ಕೆ ಕಡಿವಾಣ ಹಾಕಲಾಗಿದೆ. ಕೇವಲ ಕೆಲವು ಲೈಕ್ ಹಾಗೂ ವೀಕ್ಷಣೆಗಳಿಗಾಗಿ ಮಾಡಲಾಗುವ ರೀಲ್ಸ್‌ಗಳು, ದೇಶವು ದಶಕಗಳಿಂದ ಕಟ್ಟಿಕೊಂಡಿರುವ ಆರ್ಥಿಕ ಸಾಮ್ರಾಜ್ಯ ಹಾಗೂ ಭದ್ರತೆಯ ಇಮೇಜ್‌ ಅನ್ನು ಹಾಳುಗೆಡವಬಾರದು ಎಂಬ ಉದ್ದೇಶದಿಂದ ಸರ್ಕಾರ ಕ್ರಮ ಕೈಗೊಂಡಿದೆ ಎನ್ನಲಾಗಿದೆ.