Flash News

ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡಿ: ಇಸ್ರೇಲ್‌ ಸೇನೆಗೆ ನೆತನ್ಯಾಹು ಆದೇಶ!

ನವದೆಹಲಿ: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಗೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ಬಹಿರಂಗ ಹತ್ಯೆಯ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಶಕ್ತಿಶಾಲಿ ರೆವಲ್ಯೂಷನರಿ ಗಾರ್ಡ್‌ಗಳ ಒತ್ತಡದ ಮೇರೆಗೆ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಕಾಟ್ಜ್, “ಇಸ್ರೇಲ್ ಅನ್ನು ನಾಶಪಡಿಸುವ ಯೋಜನೆ, ಅಮೆರಿಕ ಮತ್ತು ಮುಕ್ತ ಪ್ರಪಂಚಕ್ಕೆ ಬೆದರಿಕೆ ಹಾಗೂ ಇರಾನ್ ಜನತೆಯನ್ನು ತುಳಿಯುವ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಕಗೊಳ್ಳುವ ಯಾವುದೇ ನಾಯಕನೂ ನಮ್ಮ ಟಾರ್ಗೆಟ್‌ ಆಗಲಿದ್ದಾನೆ. ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲೇ ಅಡಗಿರಲಿ, ಅವನ ಹತ್ಯೆ ಖಚಿತ,” ಎಂದು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ನ ‘ರೋರ್ ಆಫ್ ದಿ ಆರ್ಯನ್ಸ್’ (Operation “Roar of the Aryans”) ಕಾರ್ಯಾಚರಣೆಯ ಭಾಗವಾಗಿ ಈ ಮಿಷನ್ ಅನ್ನು ಪೂರೈಸಲು ಸಿದ್ಧರಾಗುವಂತೆ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೂಚನೆಯ ಮೇರೆಗೆ ಇಸ್ರೇಲ್ ರಕ್ಷಣಾ ಪಡೆಗಳಿಗೆ (IDF) ಸೂಚಿಸಿರುವುದಾಗಿ ತಿಳಿಸಿದ್ದಾರೆ. “ನಾವು ನಮ್ಮ ಅಮೆರಿಕನ್ ಪಾಲುದಾರರೊಂದಿಗೆ ಸೇರಿ ಇರಾನ್ ಆಡಳಿತದ ಸಾಮರ್ಥ್ಯವನ್ನು ಹತ್ತಿಕ್ಕಲು ಮತ್ತು ಇರಾನ್ ಜನರು ಈ ಆಡಳಿತವನ್ನು ಕಿತ್ತೊಗೆಯಲು ಅಗತ್ಯವಿರುವ ಪರಿಸ್ಥಿತಿಯನ್ನು ನಿರ್ಮಿಸಲು ನಮ್ಮ ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ಸೇರಿಸಿದ್ದಾರೆ.