ರಿಯಾದ್: ಅಮೆರಿಕ ಮತ್ತು ಇಸ್ರೇಲ್ ಜೊತೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ತನ್ನ ವಾಯುಪ್ರದೇಶ, ಜಲಪ್ರದೇಶ ಅಥವಾ ಭೂಪ್ರದೇಶವನ್ನು ಇರಾನ್ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ ಎಂಬ ಸೌದಿ ಅರೇಬಿಯಾದ ನಿಲುವಿಗೆ ಇರಾನ್ ಕೃತಜ್ಞತೆ ಸಲ್ಲಿಸಿದೆ.
ಸೌದಿ ಅರೇಬಿಯಾದಲ್ಲಿನ ಇರಾನ್ ರಾಯಭಾರಿ ಅಲಿರೆಝಾ ಎನಾಯತಿ ಅವರು ಈ ಕುರಿತು ಎಎಫ್‌ಪಿಗೆ ಪ್ರತಿಕ್ರಿಯೆ ನೀಡಿದ್ದು, ‘ಇಸ್ಲಾಮಿಕ್ ಗಣರಾಜ್ಯ ಇರಾನ್ ವಿರುದ್ಧ ತನ್ನ ವಾಯುಪ್ರದೇಶ, ನೀರು ಅಥವಾ ಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಸೌದಿ ಅರೇಬಿಯ ಹೇಳುತ್ತಲೇ ಬಂದಿದೆ. ಆ ನಿಲುವನ್ನು ನಾವು ಪ್ರಶಂಸಿಸುತ್ತೇವೆ’ ಎಂದು ಹೇಳಿದ್ದಾರೆ.
ಯುದ್ಧ ಆರಂಭವಾಗುವ ಮೊದಲು ಸೌದಿ ಸರ್ಕಾರವು ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ಸೂಚಿಸಿತ್ತು. ಜೊತೆಗೆ ಇರಾನ್ ವಿರುದ್ಧ ನಡೆಯುವ ಯಾವುದೇ ದಾಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯಾ ಪ್ರತಿಜ್ಞೆ ಮಾಡಿತ್ತು ಎಂದು ವರದಿಗಳು ತಿಳಿಸಿವೆ.


