ಕೇರಳ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ನಿಲಗಣ್ಣಿನ ಸುಂದರಿ ಮೊನಾಲಿಸಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರುದ್ರಾಕ್ಷಿ ಮಣಿಗಳನ್ನು ಮಾರಿಕೊಂಡಿದ್ದ ಹುಡುಗಿ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೆ, ಕೇರಳದ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಮನೆಯವರು ಗೆಳೆಯ ಫರ್ಮಾನ್ ಖಾನ್ ಜೊತೆಗಿನ ಪ್ರೀತಿ ವಿರೋಧಕ್ಕಾಗಿ ರಕ್ಷಣೆಗಾಗಿ ಕೇರಳಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಂಭಮೇಳದ ವೈರಲ್ ಬ್ಯೂಟಿ ಮೊನಾಲಿಸಾ ಭೋಸ್ಲೆ ತನ್ನ ಗೆಳೆಯ ಫರ್ಮಾನ್ ಖಾನ್ ಜೊತೆ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಒಂದೂವರೆ ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಪ್ರಾರಂಭವಾದ ಇವರಿಬ್ಬರ ಪ್ರೀತಿ ಇದೀಗ ಠಾಣೆ ಮೆಟ್ಟಿಲೇರಿದೆ. ಮೊನಾಲಿಸಾ ಮತ್ತು ಫರ್ಮಾನ್ ಇಬ್ಬರ ಪ್ರೀತಿಯನ್ನು ಅವರ ಕುಟುಂಬ ಸದಸ್ಯರು ವಿರೋಧಿಸಿದ ನಂತರ ಕೇರಳದಲ್ಲಿ ಆಶ್ರಯ ಪಡೆದಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ನಡುವಿನ ಪ್ರೀತಿಯನ್ನು ಮೊನಾಲಿಸಾ ಅವರ ಕುಟುಂಬ ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಮೊನಾಲಿಸಾ ತಂದೆ ಆಕೆಯನ್ನು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಂಭಮೇಳದ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿರುವ ಮೊನಾಲಿಸಾ ಚಿತ್ರದ ಚಿತ್ರೀಕರಣಕ್ಕಾಗಿ ಕೇರಳದ ಪೂವಾರ್ಗೆ ಬಂದಿದ್ದರು. ಮೊನಾಲಿಸಾ ಹಿಂದೆಯೇ ಆಕೆಯ ಪ್ರಿಯಕರ ಫರ್ಮಾನ್ ಕೂಡ ಕೇರಳಕ್ಕೆ ಆಗಮಿಸಿದ್ದರು. ಇದೀಗ ತಮ್ಮ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಕೇರಳದಲ್ಲಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಮೊನಾಲಿಸಾ ದೂರಿನ ಬಳಿಕ, ಆಕೆಯ ತಂದೆ ಜೈ ಸಿಂಗ್ ಭೋಂಸ್ಲೆ ಅವರನ್ನು ಥಂಪನೂರು ಪೊಲೀಸ್ ಠಾಣೆಗೆ ಕರೆಸಲಾಯಿತು. ಬಳಿಕ ವಿಚಾರಣೆ ನಡೆಸಿದ ಪೊಲೀಸರು ಮೊನಾಲಿಸಾಗೆ 18 ವರ್ಷ ತುಂಬಿದ್ದರಿಂದ, ಅವಳು ಯಾರೊಂದಿಗೆ ವಾಸಿಸಲು ಬಯಸುತ್ತಾಳೆ ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕಿದೆ ಎಂದು ಪೊಲೀಸರು ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.



