ಪುದು ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ
ಪುದು : ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪುದು ಇಲ್ಲಿ 2026–27ನೇ ಸಾಲಿನ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮ ಗುರುವಾರ ನಡೆಯಿತು.
ಟುಡೇ ಫೌಂಡೇಶನ್, ಪರಂಗಿಪೇಟೆ ಇದರ ಅಧ್ಯಕ್ಷರಾದ ಶ್ರೀ ಉಮ್ಮರ್ ಫಾರೂಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರಮ್ಲಾನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ಉಮ್ಮರ್ ಫಾರೂಕ್, “ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದಾಗ ಶತಮಾನವನ್ನು ಕಂಡಿರುವ ಈ ಶಾಲೆಯು ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ರಮ್ಲಾನ್ ಮಾರಿಪಳ್ಳ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಸ್ಮರಿಸಿದರು. ಆಧುನಿಕ ಯುಗದಲ್ಲಿ ಮಕ್ಕಳು ಕ್ರಿಯಾಶೀಲರಾಗಿ, ಹೊಸ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಶೈಕ್ಷಣಿಕ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ಪೋಷಕರಿಗೆ ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು. ಮಕ್ಕಳಿಂದ ಗೀತಗಾಯನ, ಕಥೆ ಹೇಳುವಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ಹಾಗೂ ಚಿತ್ರಕಲಾ ಕೃತಿಗಳ ಪ್ರದರ್ಶನವೂ ಗಮನ ಸೆಳೆಯಿತು.
ವೇದಿಕೆಯಲ್ಲಿ ಮೊಹಮ್ಮದ್ ಬುಖಾರಿ, ಎಸ್ಡಿಎಂಸಿ ಉಪಾಧ್ಯಕ್ಷೆ ನೌಶಿರಾಬಾನು, ಸದಸ್ಯರಾದ ಇಸ್ಮಾಯಿಲ್ ಮತ್ತು ಸಾರಮ್ಮ, ಪಂಚಾಯತ್ ಸದಸ್ಯರಾದ ಸಾರಮ್ಮ ಹಾಗೂ ರಝಿಯ, ಸ್ಥಳೀಯರಾದ ಕರೀಂ ಮಾರಿಪಳ್ಳ, ಸಲಾಂ ಮತ್ತು ಇತರರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಶ್ರೀಮತಿ ಮಮತಾ ವಂದಿಸಿದರು. ಶ್ರೀಮತಿ ಶಾಲೆಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಎಂಸಿ ಸದಸ್ಯರು ಹಾಗೂ ಸಹಶಿಕ್ಷಕಿಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



