ವಾಷಿಂಗ್ಟನ್: ಪ್ರಪಂಚಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಅಮೆರಿಕದ ಸಂಸ್ಥೆಯೊಂದು ಆರ್‌ಎಸ್‌ಎಸ್ ಮತ್ತು ಭಾರತದ ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಅನ್ನು ನಿಷೇಧಿಸುವಂತೆ ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಆಯೋಗ (ಯುಎಸ್‌ಸಿಐಆರ್‌ಎಫ್) ಸಂಸ್ಥೆಯು ತನ್ನ ವಾರ್ಷಿಕ ವರದಿಯಲ್ಲಿ ಈ ಸೂಚನೆ ನೀಡಿದ್ದು, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಕಳವಳಕಾರಿಯಾಗಿದೆ. ಅಲ್ಲದೇ ಭಾರತವು ಧಾರ್ಮಿಕ ಸ್ವಾತಂತ್ರ್ಯದಲ್ಲಿ ನಿರ್ದಿಷ್ಟವಾದ ಕಾಳಜಿ ಮಾತ್ರ ಹೊಂದಿದೆ ಎಂದು ಹೇಳಿದೆ.
ಈ ವರದಿ ಪ್ರಕಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ‘ರಾ’ವನ್ನು ನಿಷೇಧಿಸಬೇಕು. ಇವುಗಳ ಆಸ್ತಿ ಜಪ್ತಿ ಮಾಡಬೇಕು. ಅಮೆರಿಕಕ್ಕೆ ಇದರ ಪದಾಧಿಕಾರಿಗಳ ಪ್ರಯಾಣ ನಿಷೇಧಿಸಬೇಕು ಎಂದು ಸಲಹೆ ನೀಡಿದೆ. ಕೆಲವು ರಾಜ್ಯಗಳಲ್ಲಿ ಮತಾಂತರ ವಿರೋಧಿ ಕಾನೂನು ಜಾರಿ ಮಾಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಿರುಕುಳ ದಾಖಲಾಗಿವೆ. ಕೋಮು ಹಿಂಸಾಚಾರದ ಘಟನೆ ನಡೆದಿವೆ ಎಂದು ವರದಿ ತಿಳಿಸಿದೆ.
ರಾಜಕೀಯ ಪ್ರೇರಿತ ವರದಿ: ಭಾರತ
ಈ ವರದಿಯನ್ನು ಭಾರತ ವಿರೋಧಿಸಿದ್ದು, ಇದೊಂದು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ವರದಿಯಾಗಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ವರದಿಯನ್ನು ಇದು ನೀಡಿದೆ ಎಂದು ಹೇಳಿದೆ.



